ಚಾಮರಾಜನಗರ: ತೇರು ಎಳೆಯುವಾಗ ನೂಕು ನುಗ್ಗಲು ಉಂಟಾಗಿ ರಥದ ಚಕ್ರ ಹರಿದು ಇಬ್ಬರು ಸಾವಿಗೀಡಾಗಿದ್ದು, ಓರ್ವ ಗಂಭೀರಗೊಂಡಿದ್ದಾನೆ. ಈ ದಾರುಣ ಘಟನೆ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಗ್ರಾಮದ ಸಮೀಪದ ಪಾರ್ವತಿ ಬೆಟ್ಟದಲ್ಲಿ ನಡೆದಿದೆ. ಪಾರ್ವಾಂತಾಭ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಕಂದೇಗಾಲ ಗ್ರಾಮದ ಆಕಾಶ್ @ಸರ್ಪ(27) ಹಾಗೂ ಕಂದೇಗಾಲದ ಸ್ವಾಮಿ(40) ಮೃತರು.
ಮೊದಲು ಚಿಕಿತ್ಸೆ ಫಲಿಸದೆ ಸರ್ಪ ಸಾವಿಗೀಡಾಗಿದ್ದರು, ಈಗ ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸ್ವಾಮಿ(40) ಯನ್ನು ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಗಾಯಗೊಂಡ ಕೊಡಸೋಗೆ ಗ್ರಾಮದ ಕರಿನಾಯ್ಕ ಹಾಗೂ ಮಲ್ಲಿಕಾರ್ಜುನ (26) ಎಂಬವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ನಡೆದ ಜಾತ್ರೆಯಲ್ಲಿ ರಥವು 100 ಮೀ ಚಲಿಸುತ್ತಿದ್ದಾಗಲೇ ನೂಕು ನುಗ್ಗಲು ಉಂಟಾಗಿ ಈ ಮೂವರು ರಥದ ಚಕ್ರಕ್ಕೆ ಸಿಲುಕಿಕೊಂಡರು ಎನ್ನಲಾಗಿದೆ. ಸದ್ಯ ಮೂವರನ್ನು ಆಸ್ಪತ್ರೆಗೆ ರವಾನಿಸಲಾದರೂ ಇಬ್ಬರು ಮೃತಪಟ್ಟಿದ್ದಾರೆ.
ಗಾಯಗೊಂಡವರ ಕಾಲು, ತೊಡೆ ಸಂಪೂರ್ಣ ನಜ್ಜುಗುಜ್ಜಾಗಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಲೀಸ್ ಬಂದೋಬಸ್ತ್ ವಿಫಲವಾಗಿರುವ ಆರೋಪವೂ ಕೇಳಿಬಂದಿದೆ.
ಇದನ್ನೂ ಓದಿ : ಶಾಲಾ ಆರಂಭಕ್ಕೆ ಸಿದ್ದತೆ : ಖಾಯಂ ಶಿಕ್ಷಕರೇ ಇಲ್ಲದ ಉತ್ತರ ಕನ್ನಡದ 120 ಸರ್ಕಾರಿ ಶಾಲೆಗಳು