ಚಾಮರಾಜನಗರ : ನಾಗಾಮಣಿ ಎಂದು ನಕಲಿ ಮಣಿಯನ್ನು ಬರೋಬ್ಬರಿ 30 ಲಕ್ಷ ರೂ.ಗೆ ಮಾರಾಟ ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹನೂರು ತಾಲೂಕಿನ ಯರಂಬಾಡಿ ಗ್ರಾಮದ ಸಣ್ಣಪ್ಪಗೌಡ ಕೂಡಲೂರು ಗ್ರಾಮದ ತಂಗವೇಲು ಬಂಧಿತ ಆರೋಪಿಗಳು. ಸರಗೂರು ಗ್ರಾಮದ ರಾಜು ಎಂಬ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಘಟನೆ ಹಿನ್ನೆಲೆ : ಬೆಂಗಳೂರು ನಿವಾಸಿಗಳಾದ ಮಹೇಶ್ ಹಾಗೂ ರವಿ ಎಂಬುವರನ್ನು ಕೊಳ್ಳೇಗಾಲದಲ್ಲಿ ಪರಿಚಯಿಸಿಕೊಂಡಿದ್ದ ಆರೋಪಿಗಳು. ನಾಗಮಣಿ ಎಂಬ ಅದೃಷ್ಟದ ಹರಳಿದ್ದು ಅದನ್ನಿಟ್ಟುಕೊಂಡು ಪೂಜೆ ಸಲ್ಲಿಸಿದರೇ ವ್ಯಾಪಾರ, ವಹಿವಾಟಿನಲ್ಲಿ ಕೋಟ್ಯಂತರ ರೂ. ಲಾಭ ಬರಲಿದೆ ಎಂದು ನಂಬಿಸಿ 30 ಲಕ್ಷ ರೂ.ಗೆ ವ್ಯಾಪಾರ ಕುದುರಿಸಿಕೊಂಡಿದ್ದಾರೆ.
ಕಳೆದ 17ರ ಹನೂರು ತಾಲೂಕಿನ ಎಂ ಜಿ ದೊಡ್ಡಿ ಗ್ರಾಮದ ಬಸ್ ನಿಲ್ದಾಣದ ಬಳಿ ಚಾರ್ಜಿಂಗ್ ಲೈಟಿರುವ ಸಣ್ಣ ಮರದ ಬಾಕ್ಸ್‌ನಲ್ಲಿ ಹತ್ತಿ ತುಂಬಿ ಅದರಳೊಗೆ ನಕಲಿ ಹರಳು ಇಟ್ಟು ಮಾರಾಟ ಮಾಡಿದ್ದಾರೆ.
ಮನೆಗೆ ತೆರಳಿದ ಬಳಿಕ ವಂಚನೆಗೊಳಗಾಗಿರುವುದು ತಿಳಿದು ನಿನ್ನೆ ಅಂದರೆ 26ಕ್ಕೆ ಮಹೇಶ್ ಹಾಗೂ ರವಿ ಅವರು ರಾಮಾಪುರ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಇಂದು ಇಬ್ಬರನ್ನು ಬಂಧಿಸಿ ನಾಲ್ಕು ಲಕ್ಷ ರೂ.ವಶಕ್ಕೆ ಪಡೆದುಕೊಂಡಿದ್ದಾರೆ.