ಚಾಮರಾಜನಗರ: ಕೊರೊನಾ ಮಹಾಮಾರಿ ತಡೆಗೆಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಮಧ್ಯರಾತ್ರಿಯಿಂದಲೇ ಅಂತಾರಾಜ್ಯದ ಸರ್ಕಾರಿ ಹಾಗೂ ಖಾಸಗಿ ಬಸ್ ಸೇವೆ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಆದೇಶಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕು ತಗುಲದಂತೆ ಕಾಪಡಿಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತೀರಾ ಮುಖ್ಯ. ಆದರೆ, ಈ ಕೆಲಸ ಜನರು ಮಾಡುತ್ತಿಲ್ಲವಾದ್ದರಿಂದ ತಮಿಳುನಾಡು ಹಾಗೂ ಕೇರಳಗೆ ತೆರಳುವ ಸರ್ಕಾರಿ ಮತ್ತು ಖಾಸಗಿ ಬಸ್ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ವೈಟ್ ಬೋರ್ಡ್ ಕಾರುಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಈ ನಿರ್ಬಂಧ ಇರುವುದಿಲ್ಲ ಎಂದು ತಿಳಿಸಿದರು.
ಇನ್ನು, ಸರ್ಕಾರಿ ಕಚೇರಿಗಳಲ್ಲೂ ಜನಸಂದಣಿ ಹೆಚ್ಚುತ್ತಿರುವುದರಿಂದ ಭಾಗಶಃ ಸರ್ಕಾರಿ ಸೇವೆಗಳನ್ನು ಬಂದ್ ಮಾಡಲಾಗಿದೆ. ಆಧಾರ್ ಸೇವೆ, ಆರ್ಟಿಒ ಕಚೇರಿ, ನೋಂದಣಿ ಕೇಂದ್ರ, ಸ್ಥಳೀಯ ಸಂಸ್ಥೆಗಳ ಸೇವೆಗಳು ದೊರೆಯುವುದಿಲ್ಲ. ಆದರೆ, ಸರ್ಕಾರಿ ಕಚೇರಿಗಳಿಗೆ ಯಾವುದೇ ರಜೆ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಧಾರ್ಮಿಕ ಇಲಾಖೆಯ ಆದೇಶದಂತೆ ಜಿಲ್ಲೆಯ ಎಲ್ಲ ದೇಗುಲಗಳಿಗೂ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಎಂದಿನಂತೆ ಅರ್ಚಕರು ಪೂಜಾ ವಿಧಿ-ವಿಧಾನ ನೆರವೇರಿಸಲಿದ್ದಾರೆ. ಜಿಲ್ಲೆಯ ಎ,ಬಿ, ಸಿ ಶ್ರೇಣಿಯ 284 ದೇವಾಲಯವೂ ಬಂದ್ದಾಗಲಿದೆ. ಮಲೆಮಹದೇಶ್ವರ ಬೆಟ್ಟಕ್ಕೂ ಭಕ್ತರ ಪ್ರವೇಶ ನಿರ್ಬಂಧಿಸುವಂತೆ ಪ್ರಾಧಿಕಾರಕ್ಕೆ ಸೂಚಿಸುತ್ತೇನೆ ಎಂದರು. ಜೊತೆಗೆ, ಗುಂಡ್ಲುಪೇಟೆ ಹಾಗೂ ತೆರಕಣಾಂಬಿ ಎಪಿಎಂಸಿ ಮಾರುಕಟ್ಟೆಗಳು ಕೂಡ ಬಂದ್ದಾಗಲಿದೆ ಎಂದು ಮಾಹಿತಿ ನೀಡಿದರು.