ಚಾಮರಾಜನಗರ: ಕಳೆದ 10 ದಿನಗಳಿಂದ 50 ಸಿಬ್ಬಂದಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಜಿ.ಎಸ್. ಬೆಟ್ಟ ಮತ್ತು ಕುಂದಕೆರೆ ವಲಯದಲ್ಲಿ ಕಾರ್ಯಾಚರಣೆ ನಡೆಸಿದರೂ ನರಭಕ್ಷಕ ಹುಲಿಯ ಸುಳಿವು ಸಿಕ್ಕಿಲ್ಲ.
ಚೌಡಹಳ್ಳಿ ಗ್ರಾಮದ ಶಿವಮಾದಯ್ಯ ಎಂಬವರನ್ನು ತಿಂದು ಹಾಕಿರುವ ಹುಲಿರಾಯ ಡ್ರೋಣ್ ಕ್ಯಾಮರಾಗೂ ಕಣ್ಣಿಗೂ ಬೀಳದೆ, ಅಭಿಮನ್ಯು, ಪಾರ್ಥಸಾರಥಿ ಮತ್ತು ಪಾರ್ಥ ಎಂಬ ಆನೆಗಳ ಕಣ್ಣಿಗೂ ಕಾಣದೇ ಅರಣ್ಯ ಇಲಾಖೆಯನ್ನು ಪೇಚಿಗೆ ಸಿಲುಕಿಸಿದೆ.
ಅರಣ್ಯ ಇಲಾಖೆಗೆ ಕಾರ್ಯಾಚರಣೆ ಫಲ ನೀಡುತ್ತಿಲ್ಲವಾದ್ದರಿಂದ ರೈತರು ಆತಂಕಕ್ಕೀಡಾಗಿದ್ದು, ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ರಾತ್ರಿ ವೇಳೆ ಬೆಳೆ ಕಾಯಲು ಆಗದೇ ರೈತರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ.
ಜನರ ಕಣ್ಣಿಗೆ ಕಾಣುತ್ತಿರುವ ಹುಲಿರಾಯ, ಜನ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವ ವ್ಯಾಘ್ರ ಅರಣ್ಯ ಇಲಾಖೆ ಕಣ್ಣಿಗೇಕೆ ಕಾಣಿಸುತ್ತಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.