ಚಾಮರಾಜನಗರ: ಇಷ್ಟು ದಿನಗಳ ಕಾಲ ಚಿರತೆ ಭೀತಿಯಲ್ಲಿದ್ದ ಚಾಮರಾಜನಗರ ತಾಲೂಕಿನ ಅರಕಲವಾಡಿ ಭಾಗದ ಊರುಗಳಲ್ಲಿ ಈಗ ಹುಲಿ ಭೀತಿ ಎದುರಾಗಿದೆ. ಇದರಿಂದ ರೈತರು ಜಮೀನುಗಳಿಗೆ ಹೋಗಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅರಕಲವಾಡಿ ಎಲ್ಲೆಯಲ್ಲಿ ರೈತ ಉಮೇಶ್ ಎಂಬುವರ ಮುಂದೆಯೇ ಹುಲಿ ರಸ್ತೆ ದಾಟುವ ಮೂಲಕ ಹುಲಿ ಇರುವುದು ದೃಢಪಟ್ಟಿದ್ದು, ಬುಧವಾರ ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ಪ್ಲಾನ್ ಮಾಡಿದೆ.
ಅರಕಲವಾಡಿ ಸುತ್ತಮುತ್ತಲೂ ಪಾಳುಬಿದ್ದ ಕಲ್ಲು ಕ್ವಾರಿಗಳು ಹೆಚ್ಚಿರುವುದರಿಂದ ಚಿರತೆಗಳು ಅವಾಸ ಸ್ಥಾನ ಮಾಡಿಕೊಂಡಿದ್ದವು. ಆದರೆ ಹುಲಿಯೂ ಗ್ರಾಮದ ಜಮೀನಿಗೆ ಲಗ್ಗೆ ಇಟ್ಟಿರುವುದು ಆತಂಕ ಮೂಡಿಸಿದೆ.
ಈ ಕುರಿತು ಹುಲಿ ಪ್ರತ್ಯಕ್ಷದರ್ಶಿಯಾದ ಉಮೇಶ್ ಮಾತನಾಡಿ, ಇಷ್ಟು ದಿನ ಚಿರತೆ ಮಾತ್ರ ನೋಡುತ್ತಿದ್ದೆವು. ಈಗ ಹುಲಿಯೂ ಪ್ರತ್ಯಕ್ಷವಾಗಿರುವುದು ಭಯ ಮತ್ತು ಅಚ್ಚರಿಯಾಗಿದೆ. ಬೆಳೆ ಕಾಯಲು ರಾತ್ರಿ ತೆರಳಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಇನ್ನಾದರೂ ನಿದ್ರೆಯಿಂದ ಏಳಬೇಕು. 20-25 ಚಿರತೆಗಳಿದ್ದು, 1 ಚಿರತೆ ಹಿಡಿಯಲು 5 ತಿಂಗಳು ಸಮಯ ತೆಗೆದುಕೊಂಡರು ಎಂದು ಕಿಡಿಕಾರಿದರು.
ಮಾಹಿತಿ ನೀಡದ ಅಧಿಕಾರಿಗಳು: ಹುಲಿ ಕಾರ್ಯಾಚರಣೆ ಕುರಿತು ಚಾಮರಾಜನಗರ ಆರ್ಎಫ್ಒ ಸಭ್ಯಶ್ರೀ ಹುಲಿ ಇರುವಿಕೆ, ಕಾರ್ಯಾಚರಣೆ ಕುರಿತು ಮಾಹಿತಿ ನೀಡಲು ನಿರಾಕರಿಸಿದರು. ಡಿಎಫ್ಒ ಸಂತೋಷ್ ಪ್ರತಿಕ್ರಿಯೆಗೆ ಸಿಗಲಿಲ್ಲ.