ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರ ವಲಯ ವ್ಯಾಪ್ತಿಗೆ ಒಳಪಡುವ ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರದ ಕೆರೆಯಲ್ಲಿ ಸಿಕ್ಕ ಹುಲಿ ಮೃತದೇಹದ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಸಾಮಾನ್ಯವಾಗಿ ಕಾಡುಪ್ರಾಣಿಗಳು ತೀರಾ ದಣಿದು ನೀರು ಕುಡಿದಾಗ ಹೃದಯಾಘಾತದಿಂದ ಮೃತಪಡುತ್ತವೆ. ಮೇಲ್ನೋಟಕ್ಕೆ ಇದೇ ಕಾರಣ ಎಂದು ಶಂಕಿಸಲಾಗಿತ್ತು. ಆದರೆ, ಬುಧವಾರ ಹುಲಿ ಕಳೇಬರವನ್ನು ಮೇಲಕ್ಕೆತ್ತಿದಾಗ ಅದರ ಕೊರಳು ಮತ್ತು ಕಾಲುಗಳಲ್ಲಿ ತಂತಿ ಸಿಕ್ಕಿಹಾಕಿಕೊಂಡಿರುವುದು ಹುಲಿ ಹಂತಕರ ಮೇಲೆ ಅನುಮಾನ ಮೂಡಿಸಿದೆ.
ಹುಲಿಯ ಕಾಲಿಗೆ ತಂತಿಯಿಂದ ಕಲ್ಲು ಕಟ್ಟಿ ಕೆರೆಗೆ ಎಸೆದಿರುವುದು ಮೇಲ್ನೋಟಕ್ಕೆ ಖಚಿತವಾಗಿದೆ. ಬೇರೆ ಸ್ಥಳದಲ್ಲಿ ಮೃತಪಟ್ಟಿರುವ ಹುಲಿಯನ್ನು ಕೆರೆಗೆ ತಂದು ಬಿಸಾಡಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಉರುಳಿನಿಂದ ಮೃತಪಟ್ಟಿಲ್ಲ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರು ದೃಢಪಡಿಸಿದ್ದು ಇನ್ಯಾವ ರೀತಿಯಲ್ಲಿ ಹುಲಿಯನ್ನು ಕೊಂದಿರಬಹುದು ಎಂಬ ಜಿಜ್ಞಾಸೆ ಅಧಿಕಾರಿಗಳದ್ದಾಗಿದೆ.
ಇತ್ತೀಚೆಗೆ ಕೆಬ್ಬೇಪುರದ ಸುತ್ತಮುತ್ತ ಹುಲಿ ಕಾಟ ಹೆಚ್ಚಾಗಿತ್ತು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಹುಲಿ ಹಿಡಿಯುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಯಾವುದೇ ಕ್ರಮವನ್ನು ಅಧಿಕಾರಿಗಳು ತೆಗೆದುಕೊಂಡಿಲ್ಲ ಎಂದು ಜನರು ಆಕ್ರೋಶಗೊಂಡಿದ್ದರು. ಈಗ ಹುಲಿ ಸತ್ತಿರುವುದರಿಂದ ಉಪಟಳ ತಪ್ಪಿಸಲು ಯಾರಾದರೂ ಕೊಂದಿದ್ದಾರಾ ಎಂಬ ಅನುಮಾನ ಮೂಡಿದೆ.
"ಎರಡು-ಮೂರು ದಿನಗಳಿಂದ ಕೆರೆ ನೀರಿನಲ್ಲಿ ದೇಹ ಕೊಳೆತಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ನಿಖರವಾದ ಕಾರಣ ಕಂಡು ಹಿಡಿಯಲು ಆಗಿಲ್ಲ. ಅಂಗಾಂಗಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ವನ್ಯಪ್ರಾಣಿ ವೈದ್ಯ ವಾಸೀಂ ಮಿರ್ಜಾ ತಿಳಿಸಿದರು.
"ಹುಲಿ ಸಾವಿನ ಬಗ್ಗೆ ಖಚಿತ ಮಾಹಿತಿ ಪಡೆಯಲು ಮತ್ತು ಆರೋಪಿಗಳ ಬಂಧನಕ್ಕಾಗಿ ತಂಡವನ್ನು ರಚಿಸಲಾಗುವುದು. ಮೃತಪಟ್ಟಿರುವ ಹುಲಿ ಗಂಡಾಗಿದ್ದು, 5 ವರ್ಷವಿರಬಹುದು ಎಂದು ಅಂದಾಜು ಮಾಡಲಾಗಿದೆ. ಸಣ್ಣ ವಯಸ್ಸಿನ ಹುಲಿಯಾದ್ದರಿಂದ ಸಹಜ ಸಾವು ಎಂದು ಹೇಳಲಾಗದು. ಮರಣೋತ್ತರ ಪರೀಕ್ಷೆ ಬಳಿಕ ಎನ್ಟಿಸಿಎ ನಿರ್ದೇಶನದಂತೆ ಕಳೇಬರ ಸುಡಲಾಗಿದೆ" ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ಮಾಹಿತಿ ನೀಡಿದರು.
ನಿನ್ನೆ ಹಸುಗಳಿಗೆ ನೀರು ಕುಡಿಸಲು ರೈತನೊಬ್ಬ ಕೆರೆ ಬಳಿಗೆ ಹೋಗಿದ್ದಾಗ ಕಳೇಬರ ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ. ನಂತರ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಹುಲಿ ನೀರು ಕುಡಿಯುವಾಗ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ಅಂದಾಜಿಸಲಾಗಿತ್ತು.
ಇದನ್ನೂ ಓದಿ: ಕೆರೆಯಲ್ಲಿ ಹುಲಿ ಕಳೇಬರ ಪತ್ತೆ: ಮೊದಲೇ ಸೆರೆ ಹಿಡಿಯದಿದ್ದಕ್ಕೆ ಜನರ ಆಕ್ರೋಶ