ಚಾಮರಾಜನಗರ: ಪುನೀತ್ ರಾಜ್‍ಕುಮಾರ್ ತಮ್ಮ ನಟನೆಯಿಂದ, ವ್ಯಕ್ತಿತ್ವದಿಂದ ರಾಜ್ಯವಷ್ಟೇ ಅಲ್ಲದೆ ಹೊರರಾಜ್ಯಗಳಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿದ್ದರು. ಹನೂರು ತಾಲೂಕಿನ ಒಡೆಯರಪಾಳ್ಯ ಟಿಬೆಟಿಯನ್ ಕ್ಯಾಂಪ್ನಲ್ಲಿ ಅಪ್ಪು ಅಗಲಿಕೆ ನೋವನ್ನು ಟಿಬೆಟಿಯನ್ ವ್ಯಕ್ತಿಯೊಬ್ಬರು ತೋಡಿಕೊಂಡಿದ್ದಾರೆ.
ಪುನೀತ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಟ್ಟು ಮುಂದೆ ಅವರಿಗೆ ಒಳ್ಳೆಯದಾಗಲಿ. ಮತ್ತೊಮ್ಮೆ ಅವರು ಹುಟ್ಟಿ ಬಂದು ಚಿತ್ರರಂಗದಲ್ಲಿ ಮಿಂಚಲಿ ಎಂದು ಟಿಬೆಟಿಯನ್ ವ್ಯಕ್ತಿ ಕಂಬನಿ ಮಿಡಿದಿರುವ ವಿಡಿಯೋ ವೈರಲ್ ಆಗಿದೆ.
ಇನ್ನು ಅಗಲಿದ ನೆಚ್ಚಿನ ನಟ, ಸ್ವಂತ ಜಿಲ್ಲೆಯ ಮಗನಿಗೆ ಜಿಲ್ಲೆಯ ಜನರು ಕಂಬನಿ ಮಿಡಿದಿದ್ದು, ಅಂಗಡಿ - ಮುಂಗಟ್ಟುಗಳು, ಹೋಟೆಲ್ಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ನಮನ ಸಲ್ಲಿಸಿದ್ದಾರೆ. ಜೊತೆಗೆ ವಾಹನ ಸಂಚಾರ, ವ್ಯಾಪಾರ ವಹಿವಾಟು ಸಹ ಸಂಪೂರ್ಣ ಸ್ತಬ್ಧವಾಗಿದೆ.
ನೂರಾರು ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು ಬೈಕ್ ರ‍್ಯಾಲಿ ನಡೆಸಿ ಪುನೀತ್ ಪರ ಘೋಷಣೆ ಕೂಗಿ ಪ್ರಮುಖ ವೃತ್ತಗಳಲ್ಲಿ ಭಾವಚಿತ್ರವನ್ನಿಟ್ಟು ಪುಷ್ಪ ನಮನ ಸಲ್ಲಿಸಿದ್ದಾರೆ. ಶಿವಸೈನ್ಯ, ಅಪ್ಪು ಬ್ರಿಗೇಡ್, ರಾಜರತ್ನ ಸಮಿತಿ ಹಾಗೂ ಡಾ.ರಾಜ್ ಕುಮಾರ್ ವಿವಿಧ ಅಭಿಮಾನಿ ಸಂಘಗಳು ಗೀತಗಾಯನ, ಶ್ರದ್ಧಾಂಜಲಿ ಸಭೆಗಳನ್ನು ನಡೆಸುತ್ತಿವೆ.