ಚಾಮರಾಜನಗರ: ನಾನು ಕೋಲು ಹಿಡಿದು ರಾಜಕಾರಣ ಮಾಡಲ್ಲ. 81ರ ನಂತರ ಚುನಾವಣೆಗೆ ನಿಲ್ಲಲ್ಲ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕೊಳ್ಳೇಗಾಲದ ಬಸ್ತಿಪುರ ಬಡಾವಣೆಯಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮುಂದಿನ ವಿಧಾನಸಭೆ ಚುನಾವಣೆ ನನ್ನ ಕೊನೆಯ ಚುನಾವಣೆ. ಶಾಸಕನಾಗಿ 39 ವರ್ಷ ಪೂರೈಸಿದ್ದೇನೆ. ಮುಂದೆ 5 ವರ್ಷ ಅಧಿಕಾರ ಮುಗಿಯುವುದರೊಳಗೆ ನನಗೆ 81 ವರ್ಷ ಕಳೆಯುತ್ತದೆ. ಹಾಗಾಗಿ, ಇದು ನನ್ನ ಕೊನೆಯ ಚುನಾವಣೆ. 81 ವರ್ಷ ಕಳೆದ ನಂತರ ನಾನು ಕೋಲು ಹಿಡಿದು ರಾಜಕಾರಣ ಮಾಡುವುದಿಲ್ಲ ಎಂದರು.
ಕಳೆದ 40 ವರ್ಷ ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದೇನೆ. ಮುಂದೆಯೂ ಸಹ ಮಾಡುತ್ತೇನೆ. ಸಿದ್ದರಾಮಯ್ಯ ಅವರು ಸಿದ್ದಪ್ಪ ಸ್ವಾಮಿ 'ಬನ್ನಿ ಪವಾಡ ಗೆದ್ದಯ್ಯ ನೀವೇ ಬನ್ನಿ ಹಾಗೂ ಆಡು ಮಲೆ ಜೇನು ಮಲೆ ಎಪ್ಪತ್ತೇಳು ಮಲೆ' ಎಂಬ ಮಲೆಮಹದೇಶ್ವರ ಪದಗಳನ್ನು ಹೇಳಿ ಈ ಹಿಂದೆ ಮಹದೇಶ್ವರ ಬೆಟ್ಟಕ್ಕೆ ಹೋಗುವಾಗಿನ ಘಟನೆ ಹಂಚಿಕೊಂಡರು.
ರಾಜಪ್ಪ ಎಂಬ ಮುಖ್ಯ ಶಿಕ್ಷಕರು ಇದ್ದರು. ಅವರು ಕೊಟ್ಟ ದಿನಾಂಕವೇ ನನ್ನ ಜನ್ಮದಿನಾಂಕ ಆಗಿದ್ದು, ನನ್ನ ಹಿತೈಷಿಗಳು, ಅಭಿಮಾನಿಗಳು ಹಾಗೂ ಸ್ನೇಹಿತರು ಒಟ್ಟಾಗಿ ಸೇರಿ 75 ನೇ ಜನ್ಮ ದಿನಾಚರಣೆಯನ್ನು ದಾವಣಗೆರೆಯಲ್ಲಿ ಆಚರಿಸುತ್ತಿದ್ದಾರೆ. ಸಿದ್ದರಾಮೋತ್ಸವ ಎಂಬುದಾಗಿ ಆರ್.ಎಸ್.ಎಸ್ ನವರು ಕರೆದಿದ್ದಾರೆ.
ಸಿದ್ದರಾಮೋತ್ಸವ ಅಂಥಾ ಎಲ್ಲೂ ಇಲ್ಲ. ಆ ರೀತಿ ಉತ್ಸವ ನಡೆಯೋದು ಇಲ್ಲ. ಸಿದ್ದರಾಮಯ್ಯ-75 ಅಮೃತ ಮಹೋತ್ಸವ ಎಂದು ಆಚರಿಸಲಾಗುತ್ತದೆ ಎಂದರು. ಇನ್ನು ಇದೇ ವೇಳೆ ಅವರಿಗೆ ಕ್ರೇನ್ ಸಹಾಯದಿಂದ ಬೃಹತ್ ಸೇಬಿನ ಹಾರ ಹಾಕಿ ಬರಮಾಡಿಕೊಂಡು ಕೇಕ್ ಕತ್ತರಿಸಲಾಯಿತು.
ಓದಿ: ಆರಿದ್ರಾ ಮಳೆಗೆ ತಂಪಾದ ಬಿಸಿಲನಗರಿ: ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತ