ಚಾಮರಾಜನಗರ: ಜಿಲ್ಲೆಯನ್ನು ಹಸಿರು ವಲಯ ಎಂದು ಘೋಷಿಸಲಾಗಿದ್ದು, ಮಾಸ್ಕ್ ಜಾಗೃತಿ ಏನೋ ಉತ್ತಮವಾಗಿದೆ. ಆದ್ರೆ ಸಾಮಾಜಿಕ ಅಂತರ ಮಾತ್ರ ಮರೀಚಿಕೆಯಾಗಿದೆ.
ಹಸಿರು ವಲಯವೆಂಬ ಅಸಡ್ಡೆಯಿಂದಲೋ ಏನೋ ಜಿಲ್ಲೆಯ ಜನ ಕೊರೊನಾ ಭೀತಿಯಿಲ್ಲದೇ ಓಡಾಡುತ್ತಿದ್ದು, ಸಾಮಾಜಿಕ ಅಂತರವನ್ನ ಗಾಳಿಗೆ ತೂರಿದ್ದಾರೆ. ಅಲ್ಲಲ್ಲಿ ಸಣ್ಣ ಗೂಡಂಗಡಿಗಳು ತೆರೆದಿರುವುದರಿಂದ ಗುಂಪುಗುಂಪಾಗಿ ಸೇರುತ್ತಿರುವ ಸಾರ್ವಜನಿಕರು ಹರಟೆ ಹೊಡೆಯುವುದು ಸಾಮಾನ್ಯವಾಗಿದೆ.
ಇನ್ನು, ಜಿಲ್ಲೆಯ ಒಳಗಡೆ ವಾಹನ ಸಂಚಾರಕ್ಕೆ ಅವಕಾಶ ಸಿಕ್ಕಿರುವುದರಿಂದ ವಾಹನಗಳ ಸಂಖ್ಯೆ ಹೆಚ್ಚಿದ್ದು, ಸಂಚಾರ ನಿಯಮ ಮಾತ್ರ ಇಲ್ಲವಾಗಿದೆ. ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುತ್ತಿರುವುದು ಸಾಮಾನ್ಯವಾಗಿದ್ದು, ಕೋವಿಡ್-19 ಮುಗಿಯುವವರೆಗೆ ಬೈಕ್ನಲ್ಲಿ ಓರ್ವ ಮಾತ್ರ ಸಂಚರಿಸಬೇಕೆಂಬ ನಿರ್ಬಂಧವಿದ್ದರೂ ಇದಕ್ಕೆ ಕ್ಯಾರೆ ಎನ್ನದೆ ತ್ರಿಬಲ್ ರೈಡಿಂಗ್ ಮಾಡುತ್ತಿದ್ದಾರೆ.
ನಗರಸಭೆ ನಿತ್ಯ ಜಾಗೃತಿ ಮೂಡಿಸಿ ಮಾಸ್ಕ್ ಧರಿಸಿದವರಿಗೆ ದಂಡ ವಿಧಿಸುತ್ತಿರುವುದರಿಂದ ಜನರು ಮಾಸ್ಕ್ ಧರಿಸಿ ಮನೆ ಹೊರಗಡೆ ಬರುತ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳು, ವಾಹನ ಸವಾರರು, ಮಕ್ಕಳಾದಿಯಾಗಿ ಮುಖಗವಸು ಧರಿಸುತ್ತಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸುವುದು ಒಕೆ ಎಂಬ ಮಟ್ಟದಲ್ಲಿದ್ದರೂ ಸಾಮಾಜಿಕ ಅಂತರ ಮಾತ್ರ ಇಲ್ಲದಾಗಿದೆ.