ಚಾಮರಾಜನಗರ: ಕೆಎಸ್‍ಆರ್‍ಟಿಸಿ ಚಾಮರಾಜನಗರ ಡಿಪೋಗೆ ಅತಿಕ್ರಮ ಪ್ರವೇಶ ಮಾಡಿ, ನಗದು ಶಾಖೆಯಲ್ಲಿ 28 ಲಕ್ಷ ರೂ. ಗಳನ್ನು ಕಳ್ಳತನ ಮಾಡಿದ್ದ ಮೂವರು ಅಪರಾಧಿಗಳಿಗೆ 9 ವರ್ಷ ಜೈಲು ಶಿಕ್ಷೆಯಾಗಿದೆ.
ಜೈಲು ಶಿಕ್ಷೆಯ ಜೊತೆಗೆ ತಲಾ 20 ಸಾವಿರ ರೂ. ದಂಡ ವಿಧಿಸಿ, ನಗರದ ಹಿರಿಯ ಸಿಜೆ ಮತ್ತು ಸಿಜೆಎಂ ನ್ಯಾಯಾಲಯ ಶನಿವಾರ ಮಹತ್ವದ ತೀರ್ಪು ನೀಡಿದೆ. ಅಬ್ದುಲ್ ರೆಹಮಾನ್ ಬಿನ್ ಅಬ್ದುಲ್ ಮಜಿದ್, ಕಿಫ್‌ಯಿತ್ ವುಲ್ಲಾ ಷರೀಫ್ ಬಿನ್ ಇನಾಯಿತ್ ವುಲ್ಲಾ ಷರೀಫ್ ಹಾಗೂ ಲೋಕೇಶ್ ಬಿನ್ ಕುಮಾರ್ ಎಂಬುವರ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾ. ರಮೇಶ್ ಅವರು ಡಿಪೋ ಅತಿಕ್ರಮ ಪ್ರವೇಶ ಮಾಡಿದ್ದಕ್ಕೆ 5 ವರ್ಷಗಳ ಶಿಕ್ಷೆ ಹಾಗೂ 28 ಲಕ್ಷ ರೂ.ಗಳನ್ನು ಕಳ್ಳತನ ಮಾಡಿದ್ದಕ್ಕೆ 4 ವರ್ಷಗಳ ಶಿಕ್ಷೆ ಹಾಗೂ ತಲಾ 20 ಸಾವಿರ ದಂಡವನ್ನು ವಿಧಿಸಿ ಆದೇಶ ನೀಡಿದ್ದಾರೆ. ದಂಡ ಪಾವತಿಸಲು ವಿಫಲರಾದರೆ ಮತ್ತೆ 6 ತಿಂಗಳ ಶಿಕ್ಷೆಯನ್ನೂ ಅನುಭವಿಸುವಂತೆ ಸೂಚನೆ ನೀಡಿದ್ದಾರೆ.
ಏನಿದು ಪ್ರಕರಣ...
ಅಕ್ಟೋಬರ್ 16, 2016ರ ಮಧ್ಯರಾತ್ರಿ ಈ ಮೂವರು ಅಪರಾಧಿಗಳು ಗುಜರಿ ಸಾಮಗ್ರಿಗಳನ್ನು ಖರೀದಿ ಮಾಡುವ ನೆಪದಲ್ಲಿ ಡಿಪೋದಲ್ಲಿ ಇದ್ದು, ಅಲ್ಲಿನ ಚಲನವಲನಗಳನ್ನು ಗಮನಿಸಿ, ಡಿಪೋದಲ್ಲಿ 28 ಲಕ್ಷ ರೂ.ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆ ಅಂದಿನ ಎಸ್ಪಿ ಕುಲದೀಪ್ ಕುಮಾರ್ ಜೈನ್ ಮಾರ್ಗದರ್ಶನದಲ್ಲಿ ಅಂದಿನ ಸರ್ಕಲ್ ಇನ್ಸ್‍ಪೆಕ್ಟರ್ ಶ್ರೀಕಾಂತ್ ನೇತೃತ್ವದ ತಂಡ ಆರೋಪಿಗಳನ್ನು ಪತ್ತೆ ಮಾಡಿತ್ತು. ಕೃತ್ಯಕ್ಕೆ ಬಳಸಿದ್ದ ಆಟೋ, ಗ್ಯಾಸ್ ಕಟ್ಟರ್, ಸಿಲಿಂಡರ್ ಹಾಗೂ ಇತರೇ ವಸ್ತುಗಳನ್ನು ಜಪ್ತಿ ಮಾಡಿ ನ್ಯಾಯಾಲಯಯಕ್ಕೆ ಸಾಕ್ಷ್ಯಾಧಾರಗಳ ಸಮೇತ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಜಯಶ್ರೀ ಶೆಣೈ ವಾದ ಮಂಡಿಸಿದರು.