ಚಾಮರಾಜನಗರ : ದೆಹಲಿಯಲ್ಲಿ ಹೃದಯಾಘಾತದಿಂದ ನಿಧನರಾದ ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ಕೇರಿಯ ಸಿಆರ್ಪಿಎಫ್ ಯೋಧ ಶಿವಕುಮಾರ್ (31) ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಜಮೀನಿನಲ್ಲಿ ನಡೆಯಿತು.
ಬೆಳಗ್ಗೆ 7 ಗಂಟೆಯ ಹೊತ್ತಿಗೆ ಸೇನಾ ವಾಹನದಲ್ಲಿ ಗ್ರಾಮಕ್ಕಾಗಮಿಸಿದ ಪಾರ್ಥಿವ ಶರೀರವನ್ನು, ನೂರಾರು ಜನರು ಕಂಬನಿಗರೆದು ಬರಮಾಡಿಕೊಂಡರು. ಚಾಮರಾಜನಗರ ಎಸ್ಪಿ, ಡಿವೈಸ್ಪಿ, ತಾಲೂಕು ಆಡಳಿತದ ಅಧಿಕಾರಿಗಳ ಅಂತಿಮ ದರ್ಶನ ಪಡೆದು ಪುಷ್ಪ ನಮನ ಸಲ್ಲಿಸಿದರು. ನಂತರ ರಾಷ್ಟ್ರಗೀತೆ ಮೊಳಗಿಸಿ ಗಾಳಿಯಲ್ಲಿ ಗುಂಡು ಹಾರಿಸಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಅನಾರೋಗ್ಯ ಕಾರಣದಿಂದ ಊರಿಗೆ ವಾಪಸ್ ಮರಳುವಾಗ ಹೃದಯಾಘಾತದಿಂದ ಶುಕ್ರವಾರ ಶಿವಕುಮಾರ್ ಅಸುನೀಗಿದ್ದರು. ಸಾಯುವ ಕೆಲವೇ ತಾಸುಗಳ ಮುನ್ನ ತನ್ನ ಪತ್ನಿ, ದೊಡ್ಡಪ್ಪಗೆ ಕರೆ ಮಾಡಿ ಶೀಘ್ರವೇ ಊರಿಗೆ ಬರುವುದಾಗಿ ಹೇಳಿದ್ದರು. ಮೃತ ಯೋಧ ತಂದೆ, ತಾಯಿ, ಪತ್ನಿ ಹಾಗೂ 3 ವರ್ಷ ಹಾಗೂ 9 ತಿಂಗಳ ಮಕ್ಕಳನ್ನು ಅಗಲಿದ್ದಾರೆ.
ಓದಿ : ಪೊಲೀಸ್ ಗೃಹ ನಿರ್ಮಾಣ ಸಂಘದಿಂದ ಸೈಟ್ ಹಂಚಿಕೆ ಮಾಡದೇ ದೋಖಾ: ನ್ಯಾಯ ಒದಗಿಸುವಂತೆ ಡಿಜಿಪಿಗೆ ಪತ್ರ