ಚಾಮರಾಜನಗರ: ವಿದೇಶದಿಂದ ಮರಳಿರುವ ಜಿಲ್ಲೆಯ 7 ಮಂದಿಯ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ವೈರಸ್ (ಕೋವಿಡ್-19) ಸೋಂಕಿತ ಪ್ರಕರಣ ಪತ್ತೆಯಾಗಿಲ್ಲ. ವಿದೇಶಗಳಿಂದ ಜಿಲ್ಲೆಗೆ ಇದುವರೆಗೆ 11 ಜನರು ಬಂದಿದ್ದು, ಇವರಲ್ಲಿ 7 ಜನರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಎಲ್ಲರೂ ಆರೋಗ್ಯವಾಗಿದ್ದು, ಯಾವುದೇ ಅತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ವಿದೇಶಗಳಿಂದ ಬಂದಿರುವ ನಾಲ್ವರನ್ನು ಮನೆಯಲ್ಲಿಯೇ ಪ್ರತ್ಯೇಕಿಸಿ ಅವರ ಆರೋಗ್ಯದ ಮೇಲೂ ನಿಗಾ ವಹಿಸಿದ್ದು, ಅವರು 14 ದಿನಗಳ ಹೋಮ್ ಕ್ವಾರೆಂಟೈನ್ ಅವಧಿ ಪೂರ್ಣಗೊಳಿಸಿರುತ್ತಾರೆ ಎಂದು ತಿಳಿಸಿದ್ದಾರೆ.
ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಕ್ರಮವಾಗಿ ಕ್ವಾರೆಂಟೈನ್ ಕೇಂದ್ರವನ್ನಾಗಿ ಪರಿವರ್ತಿಸಿರುವ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನಕ್ಕೆ ಭೇಟಿ ನೀಡಿ ಕಲ್ಪಿಸಲಾಗಿರುವ ಸೌಲಭ್ಯಗಳನ್ನು ಪರಿಶೀಲಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಖಾಸಗಿ ವೈದ್ಯರ ಸಭೆ, ಛತ್ರಗಳಿಗೆ ಡಿಎಚ್ಒ ಭೇಟಿ:
ಕೋವಿಡ್-19 ಆತಂಕದ ಛಾಯೆ ಆವರಿಸಿರುವುದರಿಂದ ಡಿಎಚ್ಒ ಡಾ.ರವಿ ಛತ್ರಗಳು, ಲಾಡ್ಜ್ಗಳಿಗೆ ಭೇಟಿಯಿತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಿಳಿಹೇಳಿದ್ದಾರೆ. ಜೊತೆಗೆ, ಬೆಂಗಳೂರು, ಕೇರಳ ಸೇರಿದಂತೆ ಹೊರ ಜಿಲ್ಲೆಗಳಿಂದ ಬಂದು ಲಾಡ್ಜ್ನಲ್ಲಿ ತಂಗಿದವರ ಮಾಹಿತಿ ನೀಡಬೇಕೆಂದು ಸೂಚಿಸಿದ್ದಾರೆ.