ಚಾಮರಾಜನಗರ: ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ಅಭಿವೃದ್ಧಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಬೆಟ್ಟದ ನಾಗಮಲೆ ಭವನದಲ್ಲಿ ಸಭೆ ನಡೆಸಿದ ಸಚಿವರು, ಲಕ್ಷಾಂತರ ಭಕ್ತರು ಆಗಮಿಸುವ ಬೆಟ್ಟದಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಮೊಬೈಲ್ ನೆಟ್ವರ್ಕ್ ಸಮಸ್ಯೆಯ ತಾತ್ಕಾಲಿಕ ಪರಿಹಾರಕ್ಕಾಗಿ 20 ದಿನದ ಗಡುವು ನೀಡಿದರು. ವಿಶೇಷ ದಿನಗಳಲ್ಲಿ ಮೂರು ವಿವಿಧ ಕಂಪನಿಗಳು ನೆಟ್ವರ್ಕ್ ನೀಡಲು ಮುಂದಾಗಿರುವ ಕುರಿತು ಮಾಹಿತಿ ನೀಡಿದರು.
ಕಳೆದ ಎರಡು ವರ್ಷಗಳಿಂದ ನಿವೇಶನದ ಕೊರತೆಯಿಂದ ನನೆಗುದಿಗೆ ಬಿದ್ದಿದ್ದ ಮಹದೇಶ್ವರ ಪ್ರತಿಮೆ ಕಾಮಗಾರಿಗೆ ಒಂದು ಎಕರೆ ಜಮೀನು ಪ್ರಾಧಿಕಾರದ ಹೆಸರಲ್ಲಿನಲ್ಲಿ ಖರೀದಿಸಿದ್ದು, ಮುಂದಿನವಾರ ಗುತ್ತಿಗೆದಾರರಿಗೆ ಒಪ್ಪಂದ ಕರಾರು ಮಾಡಿಕೊಟ್ಟು ಕಾಮಗಾರಿಯನ್ನು 2 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. 132x62 ಮೀ ಎತ್ತರಕ್ಕೆ ಪೀಠವನ್ನು ನಿರ್ಮಾಣ ಮಾಡಿ ಇದರ ಸುತ್ತಲು ಒಳಭಾಗದಲ್ಲಿ 15 ಸ್ಥಳಗಳಲ್ಲಿ ಮದೇಶ್ವರನ ಜೀವನ ಚರಿತ್ರೆಯನ್ನು ಆಡಿಯೋ ಮೂಲಕ ಬಿಂಬಿಸಲಾಗುವುದು ಎಂದರು.
ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬರುವ ಭಕ್ತರ ಅನುಕೂಲಕ್ಕಾಗಿ ಈಗಾಗಲೇ 22 ಕೋಟಿ ವೆಚ್ಚದಲ್ಲಿ ತಾಳಬೆಟ್ಟದಿಂಧ ಖತ್ತಿ ಪವಾಡದವರೆಗೆ ಸುಮಾರು 7.60 ಕಿಮೀ ಅನಾಯಾಸವಾಗಿ ನಡೆದು ಬರಲು ಮೆಟ್ಟಿಲುಗಳ ನಿರ್ಮಾಣ ಹಾಗೂ ಮಾರ್ಗ ಮಧ್ಯದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ಹಾಗೂ ವಿಶ್ರಾಂತಿಗಾಗಿ ಆಸನದ ವ್ಯವಸ್ಥೆ ಕಲ್ಪಿಸಲು ಈ ಯೋಜನೆಯಲ್ಲಿ ತಿರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಚಿವರಿಂದ ಪರಿಶೀಲನೆ: ಸಭೆಗೂ ಮುನ್ನ ಬೆಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿ 512 ಕೊಠಡಿಗಳ ಕಾಮಗಾರಿ ಮೂರು ವರ್ಷಗಳಿಂದ ನಡೆಯುತ್ತಿದ್ದು, ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಸದ ಗುತ್ತಿಗೆದಾರರಿಗೆ ಆಗಸ್ಟ್ ತಿಂಗಳ ಒಳಗಡೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತರಾಟೆಗೆ ತೆಗೆದುಕೊಂಡರು. ಈ ವೇಳೆ ಹನೂರು ಶಾಸಕ ಆರ್.ನರೇಂದ್ರ, ಡಿಸಿ ಬಿ.ಬಿ.ಕಾವೇರಿ, ಎಸ್ಪಿ ಎಚ್.ಡಿ.ಆನಂದಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳಿದ್ದರು.
ಮನ ಕದ್ದ ಬಸವಣ್ಣ: ಸಾಮಾಜಿಕ ಜಾಲಾತಣದಲ್ಲಿ ಸಕ್ರಿಯರಾಗಿರುವ ಸುರೇಶ್ ಕುಮಾರ್ ಬೆಟ್ಟದಲ್ಲಿನ ದಾಸೋಹ ಕೊಠಡಿಗೆ ತೆರಳಿದಾಗಿನ ಪ್ರಸಂಗವೊಂದನ್ನು 'ನನ್ನ ಮನ ಮುಟ್ಟಿದ ಸನ್ನಿವೇಶ' ಎಂದು ಫೇಸ್ಬುಕ್ ಮತ್ತು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.ಅಡಿಗೆ ಮನೆ ಪರಿಶೀಲನೆ ವೇಳೆ ಸಾಂಬಾರು ತಯಾರಿಸುತ್ತಿದ್ದ ಬಸವಣ್ಣ ಎಂಬ ಬಾಣಸಿಗನನ್ನು ಮಾತನಾಡಿಸಿದ ಸಚಿವರು, ಕಳೆದ 32 ವರ್ಷಗಳಿಂದ ದಾಸೋಹದ ಅಡಿಗೆ ಮನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದಾಗ " ಆ ಮಾದಪ್ಪ ನನಗೆ ಕೊಟ್ಟಿರುವ ಅವಕಾಶ ಇದು" ಎಂಬ ಬಾಣಸಿಗನ ಪ್ರತಿಕ್ರಿಯೆ ಮನಮುಟ್ಟಿತು ಎಂದು ಬರೆದುಕೊಂಡಿದ್ದಾರೆ.