ಚಾಮರಾಜನಗರ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸುಳ್ವಾಡಿ ಮಾರಮ್ಮ ದೇವಿ ಪ್ರಸಾದ ದುರಂತ ಪ್ರಕರಣದ ಆರೋಪಿಗಳ ಪರ ವಕೀಲರು ವಕಾಲತ್ತು ವಹಿಸಿ ಪ್ರಕರಣ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಇದೇ ವಿಚಾರಣೆಯನ್ನು ಅಗಸ್ಟ್ 19ಕ್ಕೆ ಕೋರ್ಟ್ ಮುಂದೂಡಿದೆ.
ರಾಮನಗರದ ವಕೀಲ ವಿಶ್ವನಾಥ್ ಎಂಬುವರು ಎ1 ಆರೋಪಿ ಇಮ್ಮಡಿ ಮಹಾದೇವಸ್ವಾಮಿ ಪರ, ಬೆಂಗಳೂರಿನ ವಕೀಲ ಸದಾನಂದ ಎಂಬುವರು ಎ2 ಆರೋಪಿ ಅಂಬಿಕಾ, ಎ3 ಆರೋಪಿ ದೊಡ್ಡಯ್ಯ, ಎ4 ಆರೋಪಿ ಮಾದೇಶನ ಪರ ವಕಾಲತು ವಹಿಸಿದ್ದಾರೆ.
ಅರ್ಜಿ ಕೈಗೆತ್ತಿಕೊಂಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶ ಬಸವರಾಜ ಅವರು ಅಗಸ್ಟ್ 8ರೊಳಗೆ ಪ್ರಕರಣ ರದ್ದು ಕೋರಿ ಅರ್ಜಿಗೆ ತಕರಾರು ಸಲ್ಲಿಸಬಹುದು ಎಂದು ಸೂಚಿಸಿದ್ದಾರೆ. ಇಂದು ನಡೆದ ಅರ್ಜಿ ವಿಚಾರಣೆಯಲ್ಲಿ ಎ2, 3, 4 ಪರ ವಕಾಲತ್ತು ವಹಿಸಿದ್ದ ವಕೀಲ ಸದಾನಂದ ಗೈರಾಗಿದ್ದರು. ಸುಳ್ವಾಡಿ ವಿಷ ದುರಂತ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಈಗಾಗಲೇ ಜಿಲ್ಲಾ ನ್ಯಾಯಾಲಯ ನಿರಾಕರಿಸಿ ವಿಚಾರಣೆಯನ್ನು ಮುಂದೂಡಿದೆ. ಸರ್ಕಾರದ ಪರ ವಕೀಲೆ ಲೋಲಾಕ್ಷಿ ವಾದ ಮಂಡಿಸಿದರು.