ಚಾಮರಾಜನಗರ: ಕಚೇರಿ ಪ್ರಾರಂಭದ ವೇಳೆಗೆ ನಗರಸಭೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿ ಅನೈರ್ಮಲ್ಯ ಕಂಡು ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡ ಪರಿಣಾಮ ಸ್ವಚ್ಛತಾ ಭಾಗ್ಯ ಕೂಡಿ ಬಂದಿದೆ.
ನಗರಸಭೆ ಆರಂಭವಾಗುವ ಸಂದರ್ಭಕ್ಕೆ ಸರಿಯಾಗಿ ಡಿಸಿ ಡಾ.ಎಂ.ಆರ್.ರವಿ ಭೇಟಿ ನೀಡಿದರು. ಕಚೇರಿಯ ಅಸ್ವಚ್ಛತೆ ಕಂಡು ಸಿಬ್ಬಂದಿ ವಿರುದ್ಧ ಕಿಡಿಕಾರಿದರು. ಸಾಲು ಸಾಲು ಬೀರುಗಳನ್ನು ಪೇರಿಸಿ ಉಗ್ರಾಣದಂತೆ ಮಾಡಿದ್ದ ಆಯುಕ್ತ ರಾಜಣ್ಣ ಹಾಗೂ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಪರಿಣಾಮ 10ಕ್ಕೂ ಹೆಚ್ಚು ಬೀರುಗಳನ್ನು ಕೆಳ ಮಹಡಿಗೆ ಸಾಗಿಸಲಾಯಿತು. ಬಳಿಕ ಧೂಳು ಒರೆಸಿ, ನೆಲವನ್ನು ಸ್ವಚ್ಛಗೊಳಿಸಿದರು. ಇನ್ನೂ ಕಚೇರಿಯಲ್ಲೇ 8-10 ಬೀರುಗಳಿದ್ದು, ಶನಿವಾರ ಸಾಗಿಸುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ.
ನಗರಸಭೆಗೆ ಪ್ರವೇಶಿಸಿದರೇ ಅಶುಚಿತ್ವದಿಂದ ಗಬ್ಬುನಾರುವ ಶೌಚಾಲಯ, ಧೂಳು ತುಂಬಿದ ನೆಲಹಾಸು ಸೇರಿದಂತೆ ಎಲ್ಲವನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಡಿಸಿ ಸೂಚಿಸಿದ್ದಾರೆ.