ಚಾಮರಾಜನಗರ: ತಮಗೆ ಸಮರ್ಪಕ ಶೌಚಾಲಯವಿಲ್ಲ. ಇರುವ ಒಂದು ಶೌಚಾಲಯ ಬಳಸಲು ಸರತಿ ಸಾಲಲ್ಲಿ ನಿಲ್ಲಲು ಮುಜುಗರ ಆಗುತ್ತಿದೆ ಎಂದು ವಿದ್ಯಾರ್ಥಿನಿಯೊಬ್ಬಳು ಸಿಎಂಗೆ ಪತ್ರ ಬರೆದಿದ್ದಾಳೆ.
ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿಯಲ್ಲಿರುವ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಸಿಎಂಗೆ ಪತ್ರ ಬರೆದಿದ್ದಾರೆ. ಶಾಲೆಯಲ್ಲಿ 132 ವಿದ್ಯಾರ್ಥಿಗಳಿಗೆ ಎರಡೇ ಶೌಚಾಲಯಗಳಿದ್ದು, ಒಂದನ್ನು ಬಾಲಕರು ಬಳಸಿದರೆ ಮತ್ತೊಂದು ವಿದ್ಯಾರ್ಥಿನಿಯರು ಬಳಸಬೇಕಿದೆ. ಆದರೆ, ವಿದ್ಯಾರ್ಥಿನಿಯರು ಶೌಚಾಲಯಕ್ಕೆ ತೆರಳಲು ಸರತಿ ಸಾಲಲ್ಲಿ ನಿಲ್ಲಬೇಕಾದ ದುಃಸ್ಥಿತಿ ಇದ್ದು ಮುಜುಗರ ಆಗುತ್ತಿದೆ, ಶೌಚಾಲಯ ಕಟ್ಟಿಸಿಕೊಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಇನ್ನು, 9ನೇ ತರಗತಿ ವಿದ್ಯಾರ್ಥಿನಿ ಬರೆದ ಈ ಪತ್ರದಲ್ಲಿ, ತಾನು ಕೂಡಿಟ್ಟಿರುವ 25 ರೂ. ಹಣವನ್ನು ಶೌಚಾಲಯ ನಿರ್ಮಾಣಕ್ಕೆ ಕೊಡುತ್ತೇನೆ. ಈ ಮೂಲಕ ವಿರಾಮದ ವೇಳೆ ಸರತಿ ಸಾಲಿನಲ್ಲಿ ನಿಂತು ಶೌಚಾಲಯಕ್ಕೆ ಹೋಗಬೇಕಾದ ದುಃಸ್ಥಿತಿ ನಿವಾರಿಸಿ ಎಂದು ಅಲವತ್ತುಕೊಂಡಿದ್ದಾಳೆ. ಈ ಶಾಲೆಯನ್ನು ಸ್ಥಳೀಯ ಶಾಸಕ ನಿರಂಜನಕುಮಾರ್ ದತ್ತು ತೆಗೆದುಕೊಂಡಿದ್ದರೂ, ಈ ಪರಿಸ್ಥಿತಿ ಮುಂದುವರೆದಿರುವುದು ವಿಪರ್ಯಾಸವೇ ಆಗಿದೆ.
ಈ ಬಗ್ಗೆ ಜಿಪಂ ಸಿಇಒ ಕೆ.ಎಂ.ಗಾಯತ್ರಿ ಕಾರ್ಯೋನ್ಮುಖವಾಗಿದ್ದು ನರೇಗಾ ಯೋಜನೆಯಡಿ ಶೌಚಾಲಯಗಳನ್ನು ನಿರ್ಮಿಸುವ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ 5ಜಿ, ಡಿಜಿಟಲ್ ಕ್ರಾಂತಿ ವೇಗದಲ್ಲಿ ಗ್ರಾಮೀಣ ಭಾಗದ ಶಾಲೆಗಳಲ್ಲಿ ಕನಿಷ್ಠ ಶೌಚಾಲಯ ಇಲ್ಲದಿರುವುದು ವ್ಯವಸ್ಥೆಯ ಅಣಕವಾಗಿದೆ.
ಇದನ್ನೂ ಓದಿ: ರಷ್ಯಾ ದಾಳಿಗೆ ನಾಗರಿಕರು, ಸೈನಿಕರು ಸೇರಿ 137 ಮಂದಿ ಸಾವು: ಉಕ್ರೇನ್ ಅಧ್ಯಕ್ಷ