ಚಾಮರಾಜನಗರ: ರೆಸಾರ್ಟ್ ರಾಜಕಾರಣ, ದೋಸ್ತಿ ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆ ವಿರುದ್ಧ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಚಳವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಚಾಮರಾಜೇಶ್ವರ ದೇಗುಲದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿದ ರೈತ ಸಂಘದ ಕಾರ್ಯಕರ್ತರು, ಮಾನವ ಸರಪಳಿ ರಚಿಸಿ ಸದ್ಯದ ರಾಜಕೀಯ ವಿದ್ಯಮಾನ ಕುರಿತು ಕಿಡಿಕಾರಿದರು.
ಸಿಎಂ ಕುಮಾರಸ್ವಾಮಿ, ಸಿಎಲ್ಪಿ ನಾಯಕ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಭಾವಚಿತ್ರಗಳಿಗೆ ಪೊರಕೆಗಳಿಂದ ಹೊಡೆದು, ಅವರ ಫೋಟೋಗನ್ನು ಸುಟ್ಟು ಆಕ್ರೋಶ ಹೊರ ಹಾಕಿದರು. ಅಭಿವೃದ್ಧಿ ಬಗ್ಗೆ ಚಿಂತಿಸದೇ ರೈತರ ಹಿತ ಕಡೆಗಣಿಸಿದ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಜಿಲ್ಲಾಡಳಿತದ ಭವನದ ಎದುರು ಪ್ರತಿಭಟಿಸಿದರು. ರಾಜಕೀಯ ಹೈಡ್ರಾಮ ಕೊನೆಗೊಳಿಸಿ ಅಭಿವೃದ್ಧಿ ಬಗ್ಗೆ ಚಿಂತಿಸಿ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಹೊನ್ನೂರು ಪ್ರಕಾಶ್, ಡಾ.ಗುರುಪ್ರಸಾದ್, ಮಾಡ್ರಹಳ್ಳಿ ಮಹಾದೇವಪ್ಪ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.