ಚಾಮರಾಜನಗರ: ಹೆಲಿಕಾಪ್ಟರ್ನಲ್ಲಿ ಹಾಸನಕ್ಕೆ ಹೋಗುವ ಸಿಎಂ ಯಡಿಯೂರಪ್ಪ ಚಾಮರಾಜನಗರಕ್ಕೆ ಏಕೆ ಬರಲ್ಲ, ಇಲ್ಲಿಗೆ ಬರಲು ಅವರಿಗಿರುವ ಅಡೆತಡೆ ಏನು ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪಗೆ ಚಾಮರಾಜನಗರ ಗೊತ್ತಿಲ್ವಾ? ಅವರು ಯಾಕೆ ಚಾಮರಾಜನಗರಕ್ಕೆ ಬರುತ್ತಿಲ್ಲ? ಎಲ್ಲಾ ಜಿಲ್ಲೆಗಳನ್ನು ಸರಿಸಮಾನವಾಗಿ ನೋಡಬೇಕು. ಆಕ್ಸಿಜನ್ ದುರಂತದ ಸಂತ್ರಸ್ತರ ನೋವನ್ನು ಆಲಿಸಬೇಕಿತ್ತು, ಯಡಿಯೂರಪ್ಪ ಅವರು ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಚಾಮರಾಜನಗರ ದುರಂತ ನಡೆದರೂ ಒಬ್ಬ ಅಧಿಕಾರಿಯನ್ನೂ ವಜಾ ಮಾಡಿಲ್ಲವಲ್ಲ. ಚಾಮರಾಜನಗರ ದಿಕ್ಕಿಲ್ಲದ ನಗರವಾಗಿದೆ. ಜಿಲ್ಲಾಡಳಿತ ಸತ್ತು ಹೋಗಿದೆ. ಲೆಕ್ಕಾಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ರಾಜೀನಾಮೆ ಕೊಡಬೇಕಿತ್ತು. ಅವರಿಗೆ ಚಾಮರಾಜನಗರ ಬೇಕಿಲ್ಲ, ಯಾವಾಗಲೋ ಬರ್ತಾರೆ, ಎಲ್ಲಿಗೋ ಹೋಗ್ತಾರೆ ಎಂದು ಲೇವಡಿ ಮಾಡಿದರು.
ಭೂ ಮಾಫಿಯಾ, ಭೂಗಳ್ಳರ ಕಾರಣದಿಂದ ರೋಹಿಣಿ ಸಿಂಧೂರಿಯವರ ವರ್ಗಾವಣೆಯಾಗಿದೆ. ರಾಜ್ಯದ ದಕ್ಷ ಅಧಿಕಾರಿಗಳಲ್ಲಿ ರೋಹಿಣಿ ಕೂಡ ಒಬ್ಬರು. ಪ್ರಾಮಾಣಿಕ ಅಧಿಕಾರಿಗಳಿಗೆ ಯಡಿಯೂರಪ್ಪ ಸರ್ಕಾರ ಕೊಡುವ ಬೆಲೆ ಇದೆಯೇ ಎಂದು ಅಸಮಾಧಾನ ಹೊರಹಾಕಿದರು.