ಕೊಳ್ಳೇಗಾಲ: ಈ ಬಾರಿ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ರಾಜ್ಯಕ್ಕೆ ಉತ್ತಮ ಖಾತೆ ಸಿಗಲಿದೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು. ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೇಂದ್ರ ಸಂಪುಟ ರಚನೆ ಅಥವಾ ಸಂಪುಟ ವಿಸ್ತರಣೆಯಲ್ಲಿ ರಾಜ್ಯಕ್ಕೆ ಎಸ್ಸಿ, ಎಸ್ಟಿ ಕೋಟಾದಡಿ ಒಬ್ಬರಿಗೆ ಸಚಿವ ಸ್ಥಾನ ಸಿಗಲಿದೆ ಎಂದರು.
ನನಗೆ ಆರೋಗ್ಯ ಸರಿ ಇಲ್ಲದ ಕಾರಣ ಬೇಡವೆಂದಿದ್ದೇನೆ. ಹೀಗಾಗಿ ಕಲಬುರಗಿ ಅಥವಾ ಹಾವೇರಿ ಕ್ಷೇತ್ರದ ಸಂಸದರೊಬ್ಬರಿಗೆ ಕೇಂದ್ರ ಸಚಿವ ಸ್ಥಾನ ದೊರೆಯಬಹುದು ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಉಂಟಾಗಿರುವ ಗೊಂದಲಗಳಿಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವರು ತೆರೆ ಎಳೆದಿದ್ದಾರೆ. ಸಿಎಂ ವಿಚಾರ ಸಂಬಂಧ ಪಕ್ಷದಲ್ಲಿ ಯಾರು ಸಹ ಪರ-ವಿರೋಧ ಹೇಳಿಕೆಗಳನ್ನು ನೀಡುವಂತಿಲ್ಲ. ಒಂದು ವೇಳೆ ಹೇಳಿಕೆ ನೀಡಿದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಚಾಮರಾಜನಗರ ಆಕ್ಸಿಜನ್ ದುರಂತ ಸಂಬಂಧ ಹೈಕೋರ್ಟ್ ನೀಡಿದ ವರದಿಯಂತೆ ಮೃತರ ಕುಟುಂಬಕ್ಕೆ ಸರ್ಕಾರ ಪ್ರಾಥಮಿಕ ಹಂತದಲ್ಲಿ 2 ಲಕ್ಷ ರೂ.ಪರಿಹಾರ ನೀಡುತ್ತಿದೆ. ಅಲ್ಲದೆ ದುರಂತ ಸಂಬಂಧ ತನಿಖೆಗಾಗಿ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಪಾಟೀಲ್ ಅವರನ್ನು ನೇಮಕ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ವರದಿಯನ್ನು ಸರ್ಕಾರಕ್ಕೆ ನೀಡಲಿದ್ದಾರೆ. ಆಕ್ಸಿಜನ್ ದುರಂತ ವಿಚಾರದಲ್ಲಿ ಸರ್ಕಾರ ಯಾರನ್ನು ರಕ್ಷಿಸುವ ಕೆಲಸ ಮಾಡುತ್ತಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ದಲಿತ ಸಿಎಂ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದ ಬಗ್ಗೆ ಏನೂ ಮಾತನಾಡುವುದಿಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ ಎಂದರು.