ಚಾಮರಾಜನಗರ: ಎಪಿಎಂಸಿಗೆ ಭೇಟಿ ನೀಡಿದ್ದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ಗೆ ರೈತರೊಬ್ಬರು ತಮ್ಮ ಬೆನ್ನಿನ ಮೇಲಿನ ಬಾಸುಂಡೆ ತೋರಿಸಿ ಅಳಲು ತೋಡಿಕೊಂಡ ಘಟನೆ ಗುಂಡ್ಲುಪೇಟೆಯಲ್ಲಿ ನಡೆಯಿತು.
ಇಂದು ಬೆಳಗ್ಗೆ ಗುಂಡ್ಲುಪೇಟೆ ಎಪಿಎಂಸಿಗೆ ಸಚಿವರು ಭೇಟಿಯಿತ್ತ ವೇಳೆ ರೈತನೊಬ್ಬ ತನ್ನ ಶರ್ಟ್ ಕಳಚಿ ಬೆನ್ನ ಮೇಲಿನ ಬಾಸುಂಡೆ ತೋರಿಸಿ ಪೊಲೀಸರು ಸುಖಾಸುಮ್ಮನೆ ಹೊಡೆಯುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾನೆ. ಇನ್ನು ಹಲ್ಲೆ ಮಾಡಿಲ್ಲವೆಂದು ಪಿಎಸ್ಐ ಲತೇಶ್ ಕುಮಾರ್ ಸಮಜಾಯಿಷಿ ನೀಡಿದರು. ಮುಂದೆ ಈ ರೀತಿ ಘಟನೆ ಆಗದಂತೆ ನಡೆದುಕೊಳ್ಳಿ ಎಂದು ಸಚಿವರು ಸೂಚಿಸಿದರು.
ಬಳಿಕ ಚಾಮರಾಜನಗರ ಎಪಿಎಂಸಿಗೆ ಸಚಿವರು ಭೇಟಿ ನೀಡಿದ ವೇಳೆ ಸೇರಿದ್ದ ಕಾರ್ಯಕರ್ತರು, ಎಪಿಎಂಸಿ ದಲ್ಲಾಳಿಗಳ ದಂಡನ್ನು ಕಂಡು ವಿಚಲಿತಗೊಂಡ ಅವರು, ಪೊಲೀಸರಿಗೆ ಎಲ್ಲರನ್ನೂ ದೂರ ಕಳುಹಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಸೂಚಿಸಿದರು.