ಚಾಮರಾಜನಗರ: ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಜಿಲ್ಲೆ 9ನೇ ಸ್ಥಾನಕ್ಕೆ ಜಿಗಿದಿದೆ. ಜಿಲ್ಲೆಯ ಈ ಶೈಕ್ಷಣಿಕ ಸಾಧನೆಗೆ ಪ್ರಮುಖವಾಗಿ ನೆರವಾದುದು 'ಲ್ಯಾಂಪ್' ಎಂಬ ಕಾರ್ಯಕ್ರಮ.
ಹೌದು, Learning Achievement Motivation Programme ಎಂಬ ಕ್ರಿಯಾ ಯೋಜನೆಯ ಮೂಲಕ ಫಲಿತಾಂಶ ಸುಧಾರಿಸಲಾಗಿದೆ. ಈ ಕಾರ್ಯಕ್ರಮ ಮುಂದುವರೆಯಲಿದೆ ಎಂದು ಮಾಹಿತಿ ನೀಡುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುಳ.
ಇನ್ನೂ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಶಿಕ್ಷಣ ಸಚಿವರಾಗಿದ್ದ ವೇಳೆ ಪ್ರಾಯೋಗಿಕವಾಗಿ ಜಾರಿಗೆ ತಂದ ತೆರೆದ ಪುಸ್ತಕ ಪರೀಕ್ಷೆ ಪದ್ಧತಿಯಿಂದ ಮಕ್ಕಳು ಪುಸ್ತಕ ಓದಿನತ್ತಲೂ ಗಮನ ಹರಿಸಿದರು. ಮತ್ತೊಂದು ಪ್ರಮುಖ ಅಂಶವೆಂದರೆ ಶಿಕ್ಷಕರು ಮನೆ-ಮನೆಗೆ ಭೇಟಿ ನೀಡಿ ಪಾಲಕರೊಂದಿಗೆ ಚರ್ಚಿಸಿದರು. ಇದು ಶಾಲೆ ಬಿಟ್ಟ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮಾರ್ಗಕ್ಕೆ ಕರೆತರಲು ಸಹಕಾರಿಯಾಯಿತು ಎನ್ನುತ್ತಾರೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು.
ಇನ್ನು, ತಾಲೂಕುವಾರು ಫಲಿತಾಂಶದಲ್ಲಿ ಜಿಲ್ಲೆಯ ಹನೂರು ರಾಜ್ಯಕ್ಕೆ 11ನೇ ಸ್ಥಾನ ಬಂದಿದ್ದು, ಗುಣಾತ್ಮಕ ಫಲಿತಾಂಶದಲ್ಲಿ ಗುಂಡ್ಲುಪೇಟೆ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದೆ.
ಒಟ್ಟು 25 ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದ್ದು, ಸರ್ಕಾರಿ ಶಾಲೆಗಳ ಸಂಖ್ಯೆಯೇ 14 ಆಗಿದೆ ಮತ್ತು ತೀರಾ ಕಳಪೆ ಸಾಧನೆ ಮಾಡಿದ್ದ ಶಾಲೆಗಳು ಈ ಶೈಕ್ಷಣಿಕ ವರ್ಷದಲ್ಲಿ ತಕ್ಕಮಟ್ಟಿಗೆ ಸುಧಾರಿಸಲು ಶಿಕ್ಷಕರ ಶ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಒಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಯ ಉತ್ತಮ ಫಲಿತಾಂಶಕ್ಕೆ ಬೆಳಕಾದ LAMP ಕಾರ್ಯಕ್ರಮ ಮತ್ತಷ್ಟು ಕ್ರಿಯಾಶೀಲವಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಇನ್ನಷ್ಟು ಸಹಕಾರಿಯಾಗಲಿ ಎನ್ನುವುದು ಎಲ್ಲರ ಆಶಯ.