ಚಾಮರಾಜನಗರ/ಕೊಳ್ಳೇಗಾಲ: ಪ್ರವಾಸಿಗರ ಸೋಗಿನಲ್ಲಿ ಬೇಟೆಗೆ ಹೊಂಚು ಹಾಕಿ ತಿರುಗಾಡುತ್ತಿದ್ದ ಐವರನ್ನು ಅರಣ್ಯ ಇಲಾಖೆ ಬಂಧಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಅರಕಲವಾಡಿ ಸಮೀಪ ನಡೆದಿದೆ.
ಕೊಡಗು ಮೂಲದ ಕಿಶನ್ ಕುಮಾರ್, ಧನಂಜಯ್, ಆಸಿಕ್, ಬಡಗಲಪುರ ಗ್ರಾಮದ ಗೋವಿಂದರಾಜು ಹಾಗೂ ಬೆಂಗಳೂರಿನ ಪ್ರಮೋದ್ ಬಂಧಿತ ಆರೋಪಿಗಳು. ಕೊಡಗು ಹಾಗೂ ಬೆಂಗಳೂರಿನಿಂದ ಪ್ರವಾಸಿಗರ ಸೋಗಿನಲ್ಲಿ ಬಂದಿದ್ದ ಇವರುಗಳು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಅರಣ್ಯ ಇಲಾಖೆಯ ಗಸ್ತಿನ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದಾರೆ.
ಬಂಧಿತರಿಂದ 2 ಗನ್, 6 ಜೀವಂತ ಗುಂಡು, ಚೂರಿ, ಕತ್ತಿ, ತಲೆಬ್ಯಾಟರಿ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಅಕ್ರಮವಾಗಿ ಬಂದೂಕು ಪಡೆದು ಕಾಡು ಪ್ರಾಣಿ ಬೇಟೆಗೆ ಹೊಂಚು:
ಅಕ್ರಮವಾಗಿ ಬಂದೂಕು ಪಡೆದು ಕಾಡು ಪ್ರಾಣಿ ಬೇಟೆಯಾಡಲು ಮುಂದಾಗಿದ್ದ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಮಹದೇಶ್ವರ (55) ದೊಡ್ಡಿಂದುವಾಡಿ ಗ್ರಾಮದ ಮಹದೇವ ಅಲಿಯಾಸ್ ಗೊದ್ದಮಣಿ (50) ಬಂಧಿತ ಆರೋಪಿಗಳಾಗಿದ್ದಾರೆ.
ಇವರು ಕೆಲ ದಿನಗಳಿಂದ ಕಾಡಿನೊಳಗೆ ನುಸುಳಿ ಪ್ರಾಣಿಗಳ ಬೇಟೆಯಾಡಲು ಸಂಚು ರೂಪಿಸಿದ್ದರು. ಅದರಂತೆ ಜು.27 ರ ಬೆಳಗ್ಗೆ ಗುಂಡಾಲ್ ಜಲಾಶಯ ಸಮೀಪದ ಸೊಳ್ಳೆ ಕಟ್ಟೆಕೆರೆ ಅರಣ್ಯ ಪ್ರದೇಶಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಂದೂಕು ಹೊತ್ತೊಯ್ಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಕ್ರೈಂ ಪಿಎಸ್ಐ ತಂಡ ದಾಳಿ ನಡೆಸಿದ್ದು, ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ದಾಳಿಯಲ್ಲಿ 1 ನಾಡ ಬಂದೂಕು ಹಾಗೂ ಇನ್ನಿತರ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲುವೆಯಲ್ಲಿ ವೃದ್ಧೆಯ ಶವ ಪತ್ತೆ:
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮ ಸಮೀಪವಿರುವ ಸಿದ್ದೇಶ್ವರ ಬೆಟ್ಟ ಮುಂಭಾಗದ ಕಾಲುವೆಯಲ್ಲಿ ಅಪರಿಚಿತ ವೃದ್ಧೆಯ ಶವವೊಂದು ಪತ್ತೆಯಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಜೈಲಲ್ಲಿ ಕೂತು ಮೊಬೈಲ್ನಲ್ಲಿ ಕೋರ್ಟ್ ಕಲಾಪ ವೀಕ್ಷಿಸಿದ ಆರೋಪಿಗಳು: ಹೈಕೋರ್ಟ್ ಅಸಮಾಧಾನ