ಚಾಮರಾಜನಗರ:ಗೋಮಾತೆ ಶಾಪದಿಂದ ಕಾಂಗ್ರೆಸ್ ಇಂದು ಕಸದಬುಟ್ಟಿ ಸೇರಿದೆ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಚಾಮರಾಜನಗರದಲ್ಲಿ 'ಆಜಾದ್ ಹಿಂದೂ ಸೇನೆ' ಸಂಘಟನೆಯ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದ ಅವರು, ಕಳೆದ 75 ವರ್ಷಗಳಿಂದ ಗೋ ಹತ್ಯೆಗೆ ಬೆಂಬಲಿಸಿದ ಪರಿಣಾಮ ಎಸಿ ರೂಂಗಳಲ್ಲಿ ಕುಳಿತವರು ಇಂದು ನಡೆಯುತ್ತಿದ್ದಾರೆ.
ಮಳೆ, ಬಿಸಿಲು ಎನ್ನದೇ ರಸ್ತೆಯಲ್ಲಿ ನಡೆಯುತ್ತಿರುವುದು ಗೋಮಾತೆಯ ಶಾಪವಾಗಿದೆ. ಆದ್ದರಿಂದಲೇ ಕಾಂಗ್ರೆಸ್ ಕಸದಬುಟ್ಟಿಗೆ ಸೇರಿದೆ ಎಂದು ವಾಗ್ದಾಳಿ ನಡೆಸಿದರು. ಗೋ ಸಂರಕ್ಷಣಾ ಕಾಯ್ದೆ ಕೇವಲ ಕಾಗದದಲ್ಲಿ ಜಾರಿಯಾಗಿದ್ದು ಇಂದಿಗೂ ಗೋಹತ್ಯೆ ನಡೆಯುತ್ತಿದೆ. ಪೊಲೀಸರಿಗೆ ಒಂದು ಆಕಳಿಗೆ ಇಂತಿಷ್ಟು ಎಂದು ಹಣ ಸಂದಾಯವಾಗುತ್ತಿದೆ.
ಗೋರಕ್ಷಕರ ಮೇಲೆಯೇ ಕೇಸ್ ದಾಖಲಾಗುತ್ತಿದೆ. ನನ್ನ ವಿರುದ್ದ ಗೋರಕ್ಷಣೆ ಸಂಬಂಧ 17 ಪ್ರಕರಣ ಸೇರಿ ಒಟ್ಟು 107 ಕೇಸ್ ಹಾಕಿದ್ದು, ಸಾವಿರ ಕೇಸ್ ದಾಖಲಿಸಿದರೂ ಹಿಂದೂ ಧರ್ಮ ರಕ್ಷಣೆಯಿಂದ ಹಿಂದೆ ಸರಿಯುವುದಿಲ್ಲ ಎಂದರು.
ಈ ದೇಶದಲ್ಲಿ ಹಿಂದೂಗಳು ಸಂಘಟನೆಯಾಗಿ ಹಿಂದೂ ಧರ್ಮದ ಉಳಿವು ಮತ್ತು ಗೋಮಾತೆ ರಕ್ಷಣೆಗೆ ಹೋರಾಡದಿದ್ದರೆ ಹಿಂದೂ ಧರ್ಮಕ್ಕೆ ಆಪಾಯ ಉಂಟಾಗಲಿದೆ. ಹಿಂದೂ ಸಂಘಟನೆ ಎಂದಾಕ್ಷಣ ನೂರಾರು ವಿಘ್ನಗಳು ಎದುರಾಗುತ್ತದೆ. ನಾಲ್ಕು ದುಷ್ಟ ಶಕ್ತಿಗಳಾದ ಇಸ್ಲಾಮಿಕ್ ಶಕ್ತಿ,
ಕ್ರಿಶ್ಷಿಯನ್ ಮಿಷನರಿಗಳು, ನಾಸ್ತಿಕವಾದಿಗಳು ಹಾಗೂ ಭ್ರಷ್ಟ ರಾಜಕಾರಣಿಗಳು ಇವರು ತಮ್ಮದೇ ರೀತಿಯಲ್ಲಿ ಹಿಂದೂ ಧರ್ಮದ ಉಳಿವಿಗೆ ಅಡ್ಡಿಪಡಿಸುತ್ತಾ ನೂರಾರು ವಿಘ್ನಗಳನ್ನು ಒಡ್ಡುತ್ತಿದ್ದಾರೆ.
ಇವರ ವಿರುದ್ದ ಅಜಾದ್ ಹಿಂದೂ ಸೇನೆಯಂತಹ ಹತ್ತಾರು ಹಿಂದೂ ಸಂಘಟನೆಗಳು ಸಂಘಟಿತರಾಗಲೇಬೇಕು ಎಂದು ಮುತಾಲಿಕ್ ಕರೆಕೊಟ್ಟರು.
ಇದನ್ನೂ ಓದಿ : ಕಾಂಗ್ರೆಸ್ ಓಲೈಕೆ ರಾಜಕಾರಣದಿಂದ ಗಲಭೆ, ಭಯೋತ್ಪಾದನೆ : ಮುತಾಲಿಕ್ ಆರೋಪ