ಚಾಮರಾಜನಗರ: ಮನೋಬಲ, ಆತ್ಮಸ್ಥೈರ್ಯ ಒಂದಿದ್ದರೆ ಕೊರೊನಾ ಮಹಾಮಾರಿ ಜಯಿಸಬಹುದು ಎಂಬುದಕ್ಕೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಶ್ರೀಗಳು ನಿದರ್ಶನವಾಗಿದ್ದು, ಆಕ್ಸಿಜನ್ ಮಟ್ಟ 60ಕ್ಕೆ ಇಳಿದಿದ್ದರೂ ಈಗ ಕೋವಿಡ್ ಗೆದ್ದು ಚೇತರಿಕೆ ಕಾಣುತ್ತಿದ್ದಾರೆ.
ಗುರುಸ್ವಾಮಿಗಳಿಗೆ 65 ವರ್ಷ ವಯಸ್ಸಾಗಿದ್ದು, ಇವರಿಗೆ ಹೃದ್ರೋಗ ಸಮಸ್ಯೆ ಹಿನ್ನೆಲೆ ಆ್ಯಂಜಿಯೋಪ್ಲಾಸ್ಟಿ ಮಾಡಿ 3 ಸ್ಟಂಟ್‌ಗಳನ್ನು ಅಳವಡಿಸಲಾಗಿದೆ. ಎರಡೂ ಕಿಡ್ನಿಗಳ ಫಂಕ್ಷನಿಂಗ್ ಕಡಿಮೆ ಇದ್ದು, ಒಂದು ಬಾರಿ ಪಾರ್ಶ್ವವಾಯುಗೆ ತುತ್ತಾಗಿದ್ದಾರೆ. ಇದರೊಟ್ಟಿಗೆ ಅಧಿಕ ಮಧುಮೇಹ, ರಕ್ತದೊತ್ತಡ ಇದ್ದು, ಕೋವಿಡ್ ವಕ್ಕರಿಸಿದ ಬಳಿಕ ಆಕ್ಸಿಜನ್ ನೆರವಿನಿಂದಲೇ ಉಸಿರಾಡಬೇಕಾದ ಪರಿಸ್ಥಿತಿಯೂ ಬಂದಿತ್ತು. ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳಿದ್ದರೂ ಹಿರಿಯ ಶ್ರೀಗಳು ಕೊರೊನಾ ಗೆದ್ದು ಚೇತರಿಕೆ ಕಾಣುತ್ತಿದ್ದಾರೆ.
ಮೇ ಆರಂಭದಲ್ಲಿ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆಯಲು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ತೆರಳಿದ್ದ ವೇಳೆ ಸೋಂಕು ದೃಢಪಟ್ಟಿತ್ತು. ಬಳಿಕ ಆರಂಭದಲ್ಲಿ ಆರೋಗ್ಯ ಪರಿಸ್ಥಿತಿ ತೀರಾ ಬಿಗಡಾಯಿಸಿ ಆಕ್ಸಿಜನ್ ಮಟ್ಟ 50ರಿಂದ 60ಕ್ಕೆ ಇಳಿದಿತ್ತು. ಜೆಎಸ್‌ಎಸ್ ಆಸ್ಪತ್ರೆಯಲ್ಲೇ ಮೂರು ದಿನ ಚಿಕಿತ್ಸೆ ಪಡೆದು ಬಳಿಕ ಮೈಸೂರಿನ ಆಲನಹಳ್ಳಿಯ ಸಾಲೂರು ಶಾಖಾ ಮಠದಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್ ಪರಿಣಾಮ ಶ್ರೀಗಳ ಉಸಿರಾಟದ ಮಟ್ಟ ಕ್ಷೀಣಿಸಿ, ಊಟ, ತಿಂಡಿಯನ್ನು ಬಿಟ್ಟಿದ್ದರು. ನಂತರ ಚಿಕಿತ್ಸೆ ಪಡೆದು ದಿನಕಳೆದಂತೆ ಚೇತರಿಸಿಕೊಂಡಿದ್ದಾರೆ. ಈಗ ನೀರಿನ ಅಂಶ ಇರುವ ಆಹಾರ, ಗಂಜಿ, ದೋಸೆ ಸೇವಿಸುತ್ತಿದ್ದಾರೆ. ಕಡಿಮೆ ಪ್ರಮಾಣದಲ್ಲಿ ಆಕ್ಸಿಜನ್ ಬಳಸುತ್ತಿದ್ದಾರೆ. ದಿನಕ್ಕೆ ಎರಡು ಬಾರಿ ಶಿವಪೂಜೆ ಮಾಡುತ್ತಾ, ವಿಶ್ರಾಂತಿ ಪಡೆಯುತ್ತಿರುವುದು ಭಕ್ತರ ಸಂತಸಕ್ಕೆ ಕಾರಣವಾಗಿದೆ.
ಕೊರೊನಾದಿಂದಾಗಿ ಗಂಭೀರ ಸ್ಥಿತಿಗೆ ತಲುಪಿದ್ದ ಸಾಲೂರು ಶ್ರೀಗಳು ಧೈರ್ಯ, ನಂಬಿಕೆಗಳಿಂದ ಗಂಭೀರ ಕಾಯಿಲೆಗಳ ನಡುವೆಯೂ ಕೊರೊನಾ ಜಯಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.