ಕೊಳ್ಳೇಗಾಲ: ತಾಲೂಕು ವ್ಯಾಪ್ತಿಯ ಕೆರೆಕಟ್ಟೆಗಳು ಸೇರಿದಂತೆ ಸರ್ಕಾರಿ ಜಾಗಗಳ ಒತ್ತುವರಿಯ ಬಗ್ಗೆ ಅಧಿಕಾರಿಗಳು ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರ್ಟಿಐ ಕಾರ್ಯಕರ್ತರೊಬ್ಬರು ಜಿಲ್ಲಾ ಉಸ್ತುವರಿ ಸಚಿವರನ್ನು ಪ್ರಶ್ನಿಸಿದ ಘಟನೆ ನಗರದಲ್ಲಿ ನಡೆದಿದೆ.
ಕೊಳ್ಳೇಗಾಲಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರನ್ನು ಪಟ್ಟಣದ ಆರ್ಟಿಐ ಕಾರ್ಯಕರ್ತ ದಶರಥ ಎಂಬುವವರು ಪ್ರವಾಸಿ ಮಂದಿರದಲ್ಲಿ ಅಡ್ಡಗಟ್ಟಿ ನಗರದ ಕೆರೆಕಟ್ಟೆ ಹಾಗೂ ಸರ್ಕಾರಿ ಕಟ್ಟಡಗಳ ಸುತ್ತಮುತ್ತಲಿನ ಜಾಗಗಳನ್ನು ಕೆಲವರು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುವ ವಿಚಾರದಲ್ಲಿ ವಿಫಲವಾಗಿದ್ದಾರೆ ಎಂದು ವಿವರಿಸಿದರು.
ಅದಕ್ಕೆ ಉತ್ತರಿಸಿದ ಸಚಿವರು, ನಿನ್ನೆ ನೀರಾವರಿ ಸಚಿವ ಮಾಧುಸ್ವಾಮಿ ಬಂದಿದ್ದರು. ಅವರನ್ನು ಕೇಳದೇ ನನ್ನನ್ನ ಏಕೆ ಕೇಳುತ್ತಿದಿರಿ ಎಂದು ಮರು ಪ್ರಶ್ನೆ ಹಾಕಿ ಹೊರ ನಡೆದರು.
ಒಬ್ಬ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ದೂರಿನ ಬಗ್ಗೆ ಸರಿಯಾದ ಉತ್ತರ ನೀಡದೇ ಹೊರ ನಡೆದಿದ್ದಾರೆ. ಸರ್ಕಾರಿ ಜಾಗದ ಒತ್ತುವರಿಯ ಬಗ್ಗೆ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ಆಕ್ರೋಶ ಹೊರಹಾಕಿದರು.