ಚಾಮರಾಜನಗರ: ನಿವೃತ್ತ ಶಿಕ್ಷಕರೊಬ್ಬರು ತಾನು ಶಿಕ್ಷಕನಾಗಿ ಕಾರ್ಯನಿರ್ವಹಿಸಿದ್ದ ಸೋಲಿಗರ ಕೇರಿಗೆ ತೆರಳಿ ಕೇಕ್ ಕತ್ತರಿಸಿ, ಬಟ್ಟೆ, ಕ್ಯಾಲೆಂಡರ್ ವಿತರಿಸಿ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಿ ಸಂತಸ ಹಂಚಿಕೊಂಡರು. ಚಾಮರಾಜನಗರ ತಾಲೂಕಿನ ಕೆ.ಗುಡಿ ಸಮೀಪದ ಕನ್ನೇರಿ ಕಾಲೋನಿಯಲ್ಲಿ ಈ ಘಟನೆ ನಡೆಯಿತು.
ಚಾಮರಾಜನಗರದ ಹೆಬ್ಬಸೂರು ಗ್ರಾಮದ ವಿ. ರಾಜೇಂದ್ರ 30 ವರ್ಷಗಳ ಹಿಂದೆ ಕನ್ನೇರಿ ಕಾಲೋನಿಯ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಅಂದಿನ ಸಂಬಂಧವನ್ನು ಬಿಡದ ಇವರು ಸೋಲಿಗ ಕೇರಿಗೆ ತೆರಳಿ, ಮಕ್ಕಳೊಟ್ಟಿಗೆ ಹೊಸ ವರ್ಷವನ್ನು ಆಚರಿಸಿದರು.
ಇದೇ ವೇಳೆ, ಕಾಲೋನಿಯಲ್ಲಿನ ಮನೆಮನೆಗೆ ತೆರಳಿ ಕ್ಯಾಲೆಂಡರ್ಗಳನ್ನು ವಿತರಿಸಿದರು. ದಿನಾಂಕ, ಸಮಯ ಪ್ರತಿಯೊಬ್ಬ ವ್ಯಕ್ತಿಗೂ ಅತ್ಯಮೂಲ್ಯ. ಪ್ರತಿಯೊಬ್ಬರೂ ಸಮಯ ಮತ್ತು ದಿನಾಂಕದ ಪಾಲನೆ ಮಾಡಬೇಕೆಂದು ಅವರು ಅರಿವು ಮೂಡಿಸಿದರು.
ಕಾಡಿನ ಮಕ್ಕಳ ಕುಣಿತ:
ಹೊಸ ವರ್ಷಾಚರಣೆಯ ಸಂಭ್ರಮಾಚರಣೆ ನಡೆಸಿದ ಗಿರಿಜನರು ನಿವೃತ್ತ ಶಿಕ್ಷಕ ರಾಜೇಂದ್ರ, ಕಾಲೋನಿಯ ಮುಖಂಡ ಶಿವಣ್ಣ ಅವರೊಟ್ಟಿಗೆ ಗೊರು-ಗೊರುಕ ಗೊರುಕನ ಹಾಡು ಹಾಡಿ ನೃತ್ಯ ಮಾಡಿದರು.
ತಂದೆ-ಮಗ ಇಬ್ಬರೂ ಶಿಕ್ಷಕರು:
ಕನ್ನೇರಿ ಕಾಲೋನಿಯ ಶಿವಣ್ಣ ಮಾತನಾಡಿ, 'ರಾಜೇಂದ್ರ ಹಾಗೂ ಅವರ ತಂದೆ ಹೆಚ್.ವಿ.ವೆಂಕಟಸುಬ್ಬಯ್ಯ ಅವರು ಕೂಡ ಸೋಲಿಗರ ಶಾಲೆಗಳಲ್ಲಿ ಶಿಕ್ಷಕರಾಗಿದ್ದರು. ಸೋಲಿಗ ಮಕ್ಕಳನ್ನು ಮರೆಯದ ಅವರು ಕಾಳಜಿವಹಿಸಿ ತಮ್ಮೊಟ್ಟಿಗೆ ಬಾಂಧವ್ಯ ಮುಂದುವರೆಸಿದ್ದಾರೆ. ಇದು ನಮ್ಮ ಕಾಲೋನಿ ಜನರಿಗೆ ಖುಷಿ ವಿಚಾರ' ಎಂದರು.
ನಿವೃತ್ತ ಶಿಕ್ಷಕ ರಾಜೇಂದ್ರ ಮಾತನಾಡಿ, 'ಗಿರಿಜನ ಆಶ್ರಮ ಶಾಲೆಯಲ್ಲಿ 1979-80ರಲ್ಲಿ ಶಿಕ್ಷಕನಾಗಿದ್ದೆ. ಸೋಲಿಗ ಭಾಷೆ ಕಲಿತುಕೊಂಡಿದ್ದೇನೆ. ಆಧುನಿಕತೆಯಲ್ಲೂ ಅವರು ತಮ್ಮ ಸಂಸ್ಕೃತಿ ಬಿಟ್ಟಿಲ್ಲವಾದ್ದರಿಂದ ಅವರೊಟ್ಟಿಗೆ ಗೊರುಕನ ನೃತ್ಯ ಮಾಡಿದೆ. ಪ್ರತಿವರ್ಷವೂ ಈ ಕಾಲೋನಿಯಲ್ಲೊಂದು ವಿಶೇಷ ಕಾರ್ಯಕ್ರಮ ಮಾಡಲು ಮುಂದಾಗಿದ್ದೇನೆ' ಎಂದು ತಿಳಿಸಿದರು.
ಇದನ್ನೂ ಓದಿ: ಡ್ರಗ್ ಪೆಡ್ಲಿಂಗ್ ಆರೋಪದಡಿ ವ್ಯಕ್ತಿ ಬಂಧನ: ಪೊಲೀಸರ ಕ್ರಮ ಎತ್ತಿ ಹಿಡಿದ ಹೈಕೋರ್ಟ್