ಕೊಳ್ಳೇಗಾಲ: ಪ್ರಸಿದ್ಧ ಪ್ರವಾಸಿ ತಾಣವಾದ ಭರಚುಕ್ಕಿ ಜಲಪಾತವನ್ನು ವೀಕ್ಷಿಸಲು ಬಂದಿದ್ದ ಸಾವಿರಾರು ಪ್ರವಾಸಿಗರಿಗೆ ನಿರಾಸೆ ಉಂಟಾಗಿದೆ. ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ಎಡವಟ್ಟಿನಿಂದ ಭರಚುಕ್ಕಿ ಜಲಪಾತ ವೀಕ್ಷಣೆಗೆ ಬಂದವರು ಹಾಗೆಯೇ ವಾಪಸ್ ಮರಳಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಭರಚುಕ್ಕಿ ಜಲಪಾತ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ, ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರ ಒತ್ತಾಯಕ್ಕೆ ಮಣಿದು ಸಚಿವ ಸುರೇಶ್ ಕುಮಾರ್ ಅತಿ ಶೀಘ್ರದಲ್ಲಿ ಜಲಪಾತ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಿದ್ದರು.
ಅದರಂತೆ ಜಿಲ್ಲಾಡಳಿತ ಗುರುವಾರಕ್ಕೆ ನಿರ್ಬಂಧ ತೆರವುಗೊಳಿಸಿ, ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಲಾಗಿತ್ತು. ಆದರೆ, ಇಂದು ವೀಕ್ಷಣೆಗೆ ಬಂದಿದ್ದ ಪ್ರವಾಸಿಗರನ್ನು ಭರಚುಕ್ಕಿ ಗೇಟ್ ಬಳಿಯೇ ಅರಣ್ಯ ಇಲಾಖೆ ಸಿಬ್ಬಂದಿ ತಡೆದಿದ್ದಾರೆ. ರಾಜ್ಯದ ಮತ್ತು ಜಿಲ್ಲೆಯ ನಾನಾ ಭಾಗದಿಂದ ಬಂದಿದ್ದ ಪ್ರವಾಸಿಗರು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಪ್ರವೇಶಕ್ಕೆ ಅವಕಾಶ ನೀಡುವಂತೆ ನಮಗೆ ಮೇಲಾಧಿಕಾರಿಗಳಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಸಿಬ್ಬಂದಿ ವಾದಿಸಿದ್ದಾರೆ.
ಪ್ರವಾಸಿಗರು ಬೇಜವಾಬ್ದಾರಿ ಅಧಿಕಾರಿಗಳ ಮೇಲೆ ಪ್ರವಾಸಿಗರು ಹಿಡಿಶಾಪ ಹಾಕಿ, ಅಲ್ಲಿಂದ ತೆರಳಿದ್ದಾರೆ. ಆಗಸ್ಟ್ 9 ಭಾನುವಾರ ಜಲಪಾತ ವೀಕ್ಷಣೆಗೆ ದಿಢೀರ್ ಪ್ರವೇಶ ನೀಡಿ, ಗುರುವಾರದವರೆಗೂ ನಿರ್ಬಂಧ ಹೇರಲಾಗಿತ್ತು. ಈಗ ಗುರುವಾರ ಪ್ರವೇಶ ನೀಡದಿರುವುದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲಾಡಳಿತದ ಮಾಹಿತಿ ಆಧರಿಸಿ, ಗುಂಡ್ಲುಪೇಟೆಯಿಂದ ಜಲಪಾತ ವೀಕ್ಷಣೆಗೆ ಬಂದಿದ್ದೇವೆ. ಆದರೆ, ಅರಣ್ಯ ಇಲಾಖೆ ಸಿಬ್ಬಂದಿ ಪ್ರವೇಶ ನಿರ್ಬಂಧಿಸಿದ್ದಾರೆ. ಅಧಿಕಾರಿಗಳ ಈ ತಪ್ಪಿಗೆ ಯಾರು ಹೊಣೆ ಎಂದು ಪ್ರವಾಸಿಗ ಮಹೇಶ ಪ್ರಶ್ನಿಸಿದರು.
ಮೂಲ ಸೌಕರ್ಯ ನೆಪ ಹೇಳಿದ ಡಿಎಫ್ಓ:
ಕೋವಿಡ್-19 ಹಿನ್ನೆಲೆಯಲ್ಲಿ ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹಾಗೂ ಮೂಲ ಸೌಕರ್ಯ ವ್ಯವಸ್ಥೆ ಮಾಡಲಾಗುತ್ತಿದೆ. ನಾಳೆಯಿಂದ ಅನುಮತಿ ನೀಡಲಾಗುತ್ತದೆ ಎಂದು ಡಿಎಫ್ಓ (ಜಿಲ್ಲಾ ಅರಣ್ಯ ಅಧಿಕಾರಿ) ಏಳುಕುಂಡಲು ದೂರವಾಣಿ ಮೂಲಕ ಈಟಿವಿ ಭಾರತಗೆ ತಿಳಿಸಿದರು.
ನೂರಾರು ಕಿಲೋ ಮೀಟರ್ ದೂರದಿಂದ ಭರಚುಕ್ಕಿ ವೀಕ್ಷಣೆಗೆ ಬಂದಿದ್ದ, ಪರಿಸರ ಪ್ರೇಮಿಗಳು ಹತಾಶೆಯಿಂದ ಹಿಂತಿರುಗಬೇಕಾಯಿತು.