ಚಾಮರಾಜನಗರ : ಜಿಲ್ಲಾಸ್ಪತ್ರೆಯ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ 36 ಜನರ ಕುಟುಂಬಕ್ಕೂ ಸರ್ಕಾರ ಸೂಕ್ತ ರೀತಿ ಪರಿಹಾರ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಆಗ್ರಹಿಸಿದರು.
ಗುಂಡ್ಲುಪೇಟೆಯಲ್ಲಿ ಸಂಗಮ ಪ್ರತಿಷ್ಠಾನ ಮತ್ತು ಹೆಚ್.ಎಸ್.ಮಹದೇವಪ್ರಸಾದ್ ಟ್ರಸ್ಟ್ ವತಿಯಿಂದ ತಾಲೂಕು ಆಸ್ಪತ್ರೆಗೆ ಆ್ಯಂಬುಲೆನ್ಸ್ ಮತ್ತು ವಿವಿಧ ಔಷಧಿಗಳನ್ನು ನೀಡಿದ ಬಳಿಕ ಅವರು ಮಾತನಾಡಿದರು.
ಆಕ್ಸಿಜನ್ ದುರಂತದಲ್ಲಿ 36 ಮಂದಿ ಮೃತಪಟ್ಟಿದ್ದಾರೆ. ಆದರೆ, ಸರ್ಕಾರ ಕೇವಲ 24 ಜನರ ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಲು ಮುಂದಾಗಿದೆ. ನೀಡುತ್ತಿರುವ ಪರಿಹಾರವೂ ಸಮರ್ಪಕವಾಗಿಲ್ಲ. ಕೇವಲ ಎರಡು ಲಕ್ಷ ರೂ.ನೀಡಲು ಮುಂದಾಗಿದೆ.
ಈ ಪರಿಹಾರದಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಹೀಗಾಗಿ, ದುರಂತದಲ್ಲಿ ಮೃತಪಟ್ಟಿರುವ 36 ಮಂದಿಯ ಕುಟುಂಬಗಳಿಗೂ ತಲಾ 20 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಆಂಧ್ರಪ್ರದೇಶದಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಅಲ್ಲಿನ ಸರ್ಕಾರ ತಲಾ 20 ಲಕ್ಷ ರೂ. ಪರಿಹಾರ ನೀಡಿದೆ. ಆದರೆ, ನಮ್ಮ ಆರೋಗ್ಯ ಸಚಿವರು ಮೊದಲೆಲ್ಲ ಕೇವಲ ಮೂವರಷ್ಟೇ ಮೃತಪಟ್ಟಿದ್ದಾರೆ ಎನ್ನುತ್ತಿದ್ದರು ಎಂದು ದೂರಿದರು.
ಇನ್ನು, ಸಾರ್ವಜನಿಕರಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷದಿಂದ ವತಿಯಿಂದ ಆ್ಯಂಬುಲೆನ್ಸ್ ನೀಡಲಾಗುತ್ತಿದೆ ಎಂದರು.