ಕೊಳ್ಳೇಗಾಲ : ಅಕ್ರಮವಾಗಿ ಪಡಿತರ ಅಕ್ಕಿಯನ್ನು ಗೂಡ್ಸ್ ವಾಹನದಲ್ಲಿ ಸಾಗಣೆ ಮಾಡುತ್ತಿದ್ದವರ ಮೇಲೆ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿದ್ದು, ಓರ್ವ ಆರೋಪಿಯನ್ನು ಬಂಧಿಸಿ ಅಕ್ಕಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದ ವೆಂಕಟೇಶ್ ಬಂಧಿತ. ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಡಿತರ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಜನರಿಂದ ಖರೀದಿಸಿ, ಅದನ್ನು ಕಿರುಗಾವಲು ಕಡೆಗೆ ಸಾಗಣೆ ಮಾಡುತ್ತಿರುವಾಗ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ಸಂದರ್ಭ ಗೂಡ್ಸ್ ವಾಹನದಲ್ಲಿದ್ದ 1475 ಕೆಜಿ ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಮತ್ತೊಂದು ಪ್ರಕರಣ : ಟಗರಪುರ ಗ್ರಾಮದ ಮುಖ್ಯ ರಸ್ತೆಯಲ್ಲಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಟಿ.ನರಸೀಪುರಕ್ಕೆ ಪಡಿತರ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ದಾಳಿ ವೇಳೆ ಆರೋಪಿಗಳಾದ ಅಸ್ಲಾಂ ಪಾಷ ಹಾಗೂ ಮಹಮ್ಮದ್ ಮುಜೀರ್ ಎಂಬುವರು ಸ್ಥಳದಲ್ಲೇ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ವಾಹದಲ್ಲಿದ್ದ 2987 ಕೆಜಿ ಪಡಿತರ ಅಕ್ಕಿ ವಶಪಡಿಕೊಳ್ಳಲಾಗಿದೆ.
ಈ ಸಂಬಂಧ ಸದ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಎರಡು ಪ್ರಕರಣ ದಾಖಲಾಗಿವೆ. ನಾಪತ್ತೆಯಾದ ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗಿದೆ. ದಾಳಿಯಲ್ಲಿ ಸಿಪಿಐ ಶ್ರೀಕಾಂತ್, ಎಸ್ಐ ಅಶೋಕ್ ಭಾಗಿಯಾಗಿದ್ದರು.