ಚಾಮರಾಜನಗರ: ಕೈಹಂಚಿನ ಮೂರಂಕಣದ ಮನೆ, ಪಡಸಾಲೆ, ಮಬ್ಬು ಬೆಳಕಿನಲ್ಲಿ ನಸುನಗುತ್ತಿರುವ ಕನ್ನಡದ ಕಣ್ಮಣಿಗೆ ನಿತ್ಯ ಎರಡು ಬಾರಿ ಸಂಬಂಧಿವೊಬ್ಬರು ಪೂಜೆ ಸಲ್ಲಿಸುತ್ತಿದ್ದಾರೆ.
ನಟಸಾರ್ವಭೌಮ ಪ್ರೀತಿಸುತ್ತಿದ್ದ ದೊಡ್ಡಗಾಜನೂರಿನ ಮಂಟೇಸ್ವಾಮಿ ದೇಗುಲದ ಪಕ್ಕದಲ್ಲಿರುವ ಹುಟ್ಟಿದ ಮನೆಯನ್ನು ಓರಿಗೆಯಲ್ಲಿ ಚಿಕ್ಕಮ್ಮನಾಗಬೇಕಾದ ಪುಟ್ಟಸಿದ್ದಮ್ಮ ಕಾಪಾಡಿಕೊಂಡು ಬರುತ್ತಿದ್ದು, ಮುತ್ತುರಾಜನ ಆಟೋಟ, ನಟರಾದ ಬಳಿಕ ನಡೆಸಿದ ಸರಳ ಜೀವನ, ಇಲ್ಲಿ ಕಳೆಯುತ್ತಿದ್ದ ಕ್ಷಣವನ್ನು ನೆನೆದು ಕಣ್ಣೀರಾಗುತ್ತಾರೆ.
ನಾಡಹಂಚಿನ ಮನೆ ಇದ್ದಂತೆ ಇರಬೇಕು, ಹಂಚನ್ನು ಬದಲಾಯಿಸಬಾರದು ಎಂದು ಅಣ್ಣಾವ್ರು ಹೇಳುತ್ತಿದ್ದರು. ಇಲ್ಲಿಗೆ ಬಂದಾಗ ಪಡಸಾಲೆಯಲ್ಲೇ ಕುಳಿತು ಜನರ ಯೋಗಕ್ಷೇಮ ವಿಚಾರಿಸುತ್ತಿದ್ದರು, ತಮ್ಮೊಂದಿಗೆ ಆಟವಾಡಿದ ಸ್ನೇಹಿತರೊಂದಿಗೆ ಹರಟುತ್ತಿದ್ದರು, ಪಡಸಾಲೆಯಲ್ಲೇ ಚಾಪೆ ಹಾಸಿ ಮಲಗುತ್ತಿದ್ದರು ಎಂದು ಪುಟ್ಟಸಿದ್ದಮ್ಮ ಬರುವ ಪ್ರವಾಸಿಗರೊಂದಿಗೆ ಘಟನೆಗಳನ್ನು ಮೆಲುಕು ಹಾಕುತ್ತಾರೆ.
ಅಜ್ಜಿ ಇಲ್ಲದಿದ್ದರೆ ಪಾಳಾಗುತ್ತಿದ್ದ ಮನೆ :
ಮನೆಯನ್ನು ಶುಚಿಗೊಳಿಸಿ ಪ್ರತಿದಿನ ಬೆಳಗ್ಗೆ ಸಂಜೆ ದೀಪ, ಗಂಧದ ಕಡ್ಡಿ ಹಚ್ಚಿ ರಾಜ್ ಕುಮಾರ್ ಮೇಲಿನ ಪ್ರೀತಿಯನ್ನು ಪೂಜೆ ಮೂಲಕ ತೋರಿಸುತ್ತಾರೆ ಪುಟ್ಟಸಿದ್ದಮ್ಮ. ಈಗಾಗಲೇ ಮಣ್ಣಿನ ಗೋಡೆಯ ಮನೆಯಾಗಿದ್ದರಿಂದ ದುಸ್ಥಿತಿಗೆ ತಲುಪಿದ್ದು, ಪುಟ್ಟಸಿದ್ದಮ್ಮ ಮನೆಯಲ್ಲಿ ಇರದಿದ್ದರೇ ನಿಜಕ್ಕೂ ಪಾಳು ಬೀಳುತ್ತಿತ್ತೇನೋ ಅಂತಾ ಮನೆಗೆ ಭೇಟಿ ನೀಡುವ ಪ್ರತಿಯೊಬ್ಬ ಅಭಿಮಾನಿಯ ಮಾತು. ಇದೇ ಮನೆಯನ್ನು ರಾಜ್ ಸ್ಮಾರಕವನ್ನಾಗಿಸಬೇಕೆಂಬ ಕೂಗು ಹಲವಾರು ವರ್ಷಗಳಿಂದ ಕೇಳಿಬರುತ್ತಿದ್ದರೂ ಆಳುವವರು ಇನ್ನೂ ಮನಸ್ಸು ಮಾಡಿಲ್ಲ. ಅಣ್ಣಾವ್ರ ನೆನಪು ಗ್ರಾಮದಲ್ಲಿ ಚಿರಸ್ಥಾಯಿಯಾಗಿಸಬೇಕೆಂಬ ಸ್ಥಳೀಯರ ಒತ್ತಾಯಕ್ಕೂ ಕಿಮ್ಮತ್ತಿಲ್ಲದಂತಾಗಿದೆ.
ರಾಜ್ ಅಲ್ಲ ಮುತ್ತುರಾಜಣ್ಣ:
ದೊಡ್ಡಗಾಜನೂರಿನ ಹಿರಿಯರು ಇಂದಿಗೂ ರಾಜ್‌ಕುಮಾರ್ ಅವರನ್ನು ಮುತ್ತುರಾಜಣ್ಣ ಎಂದೇ ಸಂಬೋಧಿಸುತ್ತಾರೆ. ಆಲದಮರ, ಬೀರಪ್ಪನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದದ್ದನ್ನು ನೆನೆಯುತ್ತಾರೆ. ಇದನ್ನ ಪಾರ್ವತಮ್ಮ-ಮುತ್ತುರಾಜಣ್ಣನ ಮನೆಯೆಂದೇ ಎಲ್ಲರೂ ಕರೆಯುತ್ತಾರಂತೆ. ಇಲ್ಲಿಗೆ ಪ್ರವಾಸಿಗರು, ಅಭಿಮಾನಿಗಳು ಬಂದಾಗ ಗ್ರಾಮಸ್ಥರು ಜೊತೆಯಾಗಿ ಅಣ್ಣಾವ್ರ ಗುಣಗಾನ ಮಾಡುತ್ತಾರೆ.