ಗುಂಡ್ಲುಪೇಟೆ: ತಾಲೂಕಿನ ಚಿಕ್ಕಾಟಿ ಗ್ರಾಮದಲ್ಲಿ ನಡೆಸುತ್ತಿರುವ ವಿದ್ಯಾಗಮ ಕಾರ್ಯಕ್ರಮದಲ್ಲಿ ದಲಿತ ವಿದ್ಯಾರ್ಥಿಗಳು ಎಂಬ ಕಾರಣಕ್ಕೆ ಭವನದಿಂದ ಹೊರಗೆ ಕಳುಹಿಸಿ ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ವಿದ್ಯಾರ್ಥಿ ಯುವ ವೇದಿಕೆ ರಾಜ್ಯಾಧ್ಯಕ್ಷ ಸುರೇಶ್ ಮೌರಿ ನೇತೃತ್ವದಲ್ಲಿ ನಿನ್ನೆ ಬೇಗೂರು ಠಾಣೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ವಿದ್ಯಾಗಮ ಕಾರ್ಯಕ್ರಮ ಗ್ರಾಮದ ಕನಕ ಭವನದಲ್ಲಿ ನಡೆಯುತ್ತಿದ್ದು, ಗ್ರಾಮದ ಮುಖಂಡರೊಬ್ಬರು ದಲಿತ ವಿದ್ಯಾರ್ಥಿಗಳು ಭವನದ ಒಳಗೆ ಬರಬೇಡಿ, ಮೆಟ್ಟಿಲ ಬಳಿ ಕುಳಿತು ಅಭ್ಯಾಸ ಮಾಡಿ ಎಂದು ತಿಳಿಸಿದ್ದಾರೆ. ಅದರಂತೆ ಶಿಕ್ಷಕರು ಸಹ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ಕೂಡಲೇ ಶಾಲಾ ಶಿಕ್ಷಕರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಮಾತನಾಡಿ, ಗ್ರಾಮದ ಮುಖಂಡರೊಬ್ಬರು ಮಕ್ಕಳಿಗೆ ಹೊರಗೆ ಇರುವಂತೆ ತಿಳಿಸಿದ್ದಾರೆ. ಆದರೆ ಆ ಸಂದರ್ಭದಲ್ಲಿ ಶಿಕ್ಷಕರು ಇರಲಿಲ್ಲವಂತೆ, ಶಿಕ್ಷಕರಿಗೆ ನೋಟಿಸ್ ನೀಡಿದ್ದೇನೆ. ಉತ್ತರ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇಂದು ತಹಶೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಗ್ರಾಮಸ್ಥರು ತೀರ್ಮಾನ ಮಾಡಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.