ಚಾಮರಾಜನಗರ: ಅ.6 ರಿಂದ 9 ರವರೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದು, 5 ಜಿಲ್ಲೆಗಳ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇಗುಲಗಳಿಗೆ ಭೇಟಿ ನೀಡಲಿದ್ದಾರೆ.
ಅ.6ರ ಸಂಜೆ 5.30ಕ್ಕೆ ರಾಜಭವನದಲ್ಲಿ ಹೈಕೋರ್ಟ್ ನ್ಯಾಯಾಧೀಶರು ಮತ್ತು ಅವರ ಕುಟುಂಬಸ್ಥರೊಂದಿಗೆ ಚಹಾ ಕೂಟದಲ್ಲಿ ಭಾಗಿಯಾಗಲಿದ್ದಾರೆ. ಅ.07 ರ ಬೆಳಗ್ಗೆ 11.40 ಕ್ಕೆ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ 3.30 ರಿಂದ 4.30ರವರೆಗೆ ಚಾಮರಾಜನಗರ ಮೆಡಿಕಲ್ ಕಾಲೇಜಿನ 450 ಹಾಸಿಗೆಗಳ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ.
ಅ.08 ರ ಬೆಳಗ್ಗೆ 11.50ಕ್ಕೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರಪತಿಗಳ ಪ್ರವಾಸ ಪಟ್ಟಿಯನ್ನು ರಾಷ್ಟ್ರಪತಿಗಳ ಆಪ್ತ ಕಾರ್ಯದರ್ಶಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಾನಿಸಿದ್ದಾರೆ. ಮಂಗಳೂರು ಮತ್ತು ಮೈಸೂರಿನ ಪ್ರವಾಸದ ವಿವರಗಳನ್ನು ಪಟ್ಟಿಯಲ್ಲಿ ತಿಳಿಸಿಲ್ಲ.
ಕಳೆದ ಎರಡು ದಿನಗಳ ಹಿಂದೆ ರಾಷ್ಟ್ರಪತಿ ಭವನದ ಸೂಚನೆ ಮೇರೆಗೆ ಚಾಮರಾಜನಗರ ಎಡಿಸಿ ಕಾತ್ಯಾಯಿನಿ ದೇವಿ ನೇತೃತ್ವದಲ್ಲಿ ಬಿಳಿಗಿರಿರಂಗನ ಬೆಟ್ಟ ಹಾಗೂ ಚಾಮರಾಜನಗರದ ಎಡಪುರ ಬಳಿ ಜಾಗ ಗುರುತಿಸಿದ್ದಾರೆ. ಚಾಮರಾಜನಗರ ಹೊರ ವಲಯದಲ್ಲಿರುವ ಯಡಬೆಟ್ಟದ ಮೆಡಿಕಲ್ ಕಾಲೇಜಿನ ಬಳಿ ಸುಮಾರು 116 ಕೋಟಿ ರೂ.ವೆಚ್ಚದಲ್ಲಿ 450 ಬೆಡ್ ಸೌಲಭ್ಯವುಳ್ಳ ಆಸ್ಪತ್ರೆ ನಿರ್ಮಾಣಗೊಂಡಿದ್ದು ಉದ್ಘಾಟನೆಗಾಗಿ ಕಾಯುತ್ತಿದೆ.
ಇದನ್ನೂ ಓದಿ: ಅ.1 ರಿಂದ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ: Conditions Apply!