ಚಾಮರಾಜನಗರ: ಬೈಕ್ ಸವಾರನಿಗೆ ಅವಾಚ್ಯ ಪದಗಳಿಂದ ನಿಂದಿಸಿ ನಡುರಸ್ತೆಯಲ್ಲಿಯೇ ಎಎಸ್ಐ ಒದೆಯಲು ಮುಂದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆ ಇಂದು ಬೆಳಗ್ಗೆ ಕೊಳ್ಳೇಗಾಲದಲ್ಲಿ ನಡೆದಿದೆ ಎನ್ನಲಾಗ್ತಿದೆ. ಔಷಧಿ ಚೀಟಿ ಹಿಡಿದು ಬಂದ ಯುವಕನನ್ನು ಎಳೆದಾಡಿದ ಪೊಲೀಸರು ಅವಾಚ್ಯ ಪದಗಳಿಂದ ಬೈದು, ಒದೆಯಲು ಮುಂದಾಗಿ ಬೈಕ್ ಕಸಿದುಕೊಂಡಿರುವ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ. ವಿಡಿಯೋವನ್ನು ಕೊಳ್ಳೇಗಾಲ ಸಮೀಪದ ಹಂಪಾಪುರ ಗ್ರಾಮದ ಅಭಿಷೇಕ್ ಎಂಬಾತ ತನ್ನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ನೆಟ್ಟಿಗರು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.
ಪೊಲೀಸರು ಮಾಡುತ್ತಿರುವುದು ನಮ್ಮ ಒಳ್ಳೆಯದಕ್ಕೆ. ಆದರೆ, ಇತ್ತೀಚೆಗೆ ಕೆಲ ಪೊಲೀಸರು ದರ್ಪದಿಂದ ವರ್ತಿಸುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಇಂತಹವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಜನರು ಒತ್ತಾಯಿಸಿದ್ದಾರೆ.
ಘಟನೆ ಸಂಬಂಧ ಮಾಹಿತಿಗಾಗಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕೊಳ್ಳೇಗಾಲ ಪಿಎಸ್ಐಗೆ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ.