ಚಾಮರಾಜನಗರ : ಕಾವೇರಿ ನೀರು ಬಿಡುಗಡೆ ಸಂಬಂಧ ಕಾನೂನು ಸುವ್ಯವಸ್ಥೆಗಾಗಿ ಕೊಳ್ಳೇಗಾಲಕ್ಕೆ ಬಂದಿದ್ದ ಕೆಎಸ್ಆರ್ಪಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಇಂದು (ಶುಕ್ರವಾರ) ನಡೆದಿದೆ. ಮೋಹನ್ (44) ಮೃತರು.
ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದು, ಈ ಸಂಬಂಧ ಗಲಭೆಗಳು ನಡೆಯದಂತೆ ಎಚ್ಚರ ವಹಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಕೆಎಸ್ಆರ್ಪಿ ಮೈಸೂರು ಬೆಟಾಲಿಯನ್ 23 ಸಿಬ್ಬಂದಿ ಕೊಳ್ಳೇಗಾಲದಲ್ಲಿ ಕರ್ತವ್ಯಕ್ಕೆಂದು ಎರಡು ದಿನಗಳ ಹಿಂದೆ ಆಗಮಿಸಿ ಸಾರ್ವಜನಿಕರ ವಿದ್ಯಾರ್ಥಿ ನಿಲಯದಲ್ಲಿ ಉಳಿದುಕೊಂಡಿದ್ದರು. ಕರ್ತವ್ಯ ಮುಗಿಸಿಕೊಂಡು ಹಾಸ್ಟೆಲ್ನಲ್ಲಿ ತಂಗಿದ್ದ ಹೆಡ್ ಕಾನ್ಸ್ಟೇಬಲ್ ಮೋಹನ್ ಅವರಿಗೆ ಹಠಾತ್ ಹೃದಯಾಘಾತವಾಗಿದೆ.
ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ವಾರಸುದಾರರಿಗೆ ಒಪ್ಪಿಸಲಾಗಿದೆ. ಮೋಹನ್ ಮಡಿಕೇರಿ ಜಿಲ್ಲೆಯ ನಾಪೋಕ್ಲು ಹೋಬಳಿಯ ಕಕ್ಕಬೇ ಗ್ರಾಮದವರು ಎಂದು ತಿಳಿದುಬಂದಿದೆ. ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ಕಾನ್ಸ್ಟೇಬಲ್ ಸಾವು (ಇತ್ತೀಚಿನ ಘಟನೆಗಳು): ಪೊಲೀಸ್ ಕಾನ್ಸ್ಟೇಬಲ್ವೊಬ್ಬರು ಹೃದಯಾಘಾತದಿಂದ ನಿಧನ ಹೊಂದಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ (ಆಗಸ್ಟ್ -11-2023) ನಡೆದಿತ್ತು. ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ರಾತ್ರಿ ವೇಳೆ ಘಟನೆ ಜರುಗಿತ್ತು. ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ಬಸವನಗೌಡ ಮಾಲಿಪಾಟೀಲ್ ಆಗೋಲಿ (34) ಮೃತರೆಂದು ತಿಳಿದುಬಂದಿತ್ತು.
ಇವರು ಮಸ್ಕಿ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲಸ ಮುಗಿಸಿಕೊಂಡು ಮನೆಯಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿತ್ತು. ತಕ್ಷಣವೇ ಆಸ್ಪತ್ರೆಗೆ ರವಾನಿಸುತ್ತಿದ್ದಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದರು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಮೃತ ಕಾನ್ಸ್ಟೇಬಲ್ ಅಗಲಿದ್ದಾರೆ. ಸಕಲ ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆಯನ್ನು ಸ್ವಗ್ರಾಮ ಆಗೋಲಿಯಲ್ಲಿ ನೆರವೇರಿಸಲಾಗಿತ್ತು. ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಂತಾಪ ಸೂಚಿಸಿದ್ದರು. ಬಸವನಗೌಡ ಅವರಿಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಹೃದಯ ಸಂಬಂಧಿತ ಯಾವುದೇ ಕಾಯಿಲೆ ಇರಲಿಲ್ಲ ಎಂದು ತಿಳಿದುಬಂದಿತ್ತು.
ಸಹಾಯಕ ಸಬ್ಇನ್ಸ್ಪೆಕ್ಟರ್ ಹೃದಯಾಘಾತದಿಂದ ಸಾವು: ಕರ್ತವ್ಯನಿರತ ಎಎಸ್ಐ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿರಾ ಪೊಲೀಸ್ ಠಾಣೆಯಲ್ಲಿ (ಜುಲೈ 7-2023) ನಡೆದಿತ್ತು. ಶಿರಾ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ಇನ್ಸ್ಪೆಕ್ಟರ್ ಆಗಿದ್ದ ಗಂಗಣ್ಣ (56) ಮೃತರು. ಗಂಗಣ್ಣ ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಕರ್ತವ್ಯದಲ್ಲಿದ್ದರು. ಈ ವೇಳೆ ಹೃದಯಾಘಾತವಾಗಿದೆ. ಜೊತೆಯಲ್ಲಿದ್ದ ಪೊಲೀಸ್ ಸಿಬ್ಬಂದಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ತುಮಕೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಮಗಳನ್ನು ಟ್ಯೂಷನ್ಗೆ ಬಿಡಲು ಹೋಗಿ ತಂದೆ ಸಾವು: ಮಗಳನ್ನು ಟ್ಯೂಷನ್ಗೆ ಬಿಡಲು ಬಂದಿದ್ದ ತಂದೆಗೆ ಹೃದಯಾಘಾತವಾಗಿ ರಸ್ತೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಹಾಸನ ನಗರದ ಸಾಲಗಾಮೆ ರಸ್ತೆಯಲ್ಲಿ (ಜುಲೈ 19-2023) ನಡೆದಿತ್ತು.
ಇದನ್ನೂ ಓದಿ: Heart Attack: ರಾಯಚೂರು: ಹೃದಯಾಘಾತದಿಂದ ಪೊಲೀಸ್ ಕಾನ್ಸ್ಟೇಬಲ್ ಸಾವು