ಚಾಮರಾಜನಗರ : ಕ್ಷುಲ್ಲಕ ವಿಚಾರಕ್ಕೆ ಪತ್ನಿಗೆ ಮುಚ್ಚಿನಿಂದ ಕೊಚ್ಚಿ ಕೊಂದು ಪರಾರಿಯಾಗಿದ್ದ ಪತಿಯೂ ಸಹ ಇದೀಗ ನೇಣಿಗೆ ಶರಣಾಗಿರುವ ಘಟನೆ ಯಳಂದೂರು ತಾಲೂಕಿನ ಬನ್ನಿಸಾರಿಗೆ ಗ್ರಾಮದಲ್ಲಿ ನಡೆದಿದೆ. ಇದರಿಂದಾಗಿ ಕೇವಲ ಎರಡು ದಿನಗಳಲ್ಲೇ ಮೂವರು ಮಕ್ಕಳು ತಮ್ಮ ತಂದೆ ಹಾಗೂ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಸುಶೀಲಾ ಮತ್ತು ನಾಗರಾಜು ಎಂಬುವರು ಮೃತ ದುರ್ದೈವಿಗಳಾಗಿದ್ದಾರೆ. ಜೂನ್ 9ರ ಸಂಜೆ ದಂಪತಿ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಪತ್ನಿ ಸುಶೀಲಾಗೆ ನಾಗರಾಜು ಮಚ್ಚಿನಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸುಶೀಲಾರನ್ನು ಸಂಬಂಧಿಗಳು ಆಸ್ಪತ್ರೆಗೆ ಸೇರಿಸಿರಾದರೂ, ಚಿಕಿತ್ಸೆ ಫಲಕಾರಿಯಾಗದೇ ಅಂದೇ ಮೃತಪಟ್ಟಿರುತ್ತಾರೆ.
ಇದನ್ನೂ ಓದಿ: ಮುಂದಿನ ಎರಡು ವರ್ಷ ನಾನೇ ಸಿಎಂ: ಹಾಸನದಲ್ಲಿ ಬಿಎಸ್‌ವೈ ಹೇಳಿಕೆ
ಇನ್ನು, ಹೆಂಡತಿಯನ್ನು ಹೊಡೆದು ತಲೆ ಮರೆಸಿಕೊಂಡಿದ್ದ ನಾಗರಾಜು ಗುರುವಾರ ನೇಣಿಗೆ ಶರಣಾಗಿದ್ದು, ಘಟನೆ ಇಂದು ಬೆಳಕಿಗೆ ಬಂದಿದೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಅವರಲ್ಲಿ ಹಿರಿಯ ಮಗಳಿಗೆ ಮದುವೆಯಾಗಿದೆ. ಇನ್ನಿಬ್ಬರಲ್ಲಿ ಓರ್ವ ಎಸ್ಎಸ್ಎಲ್ಸಿ ಮತ್ತು ಮತ್ತೊಬ್ಬ ಬಾಲಕಿ 8ನೇ ತರಗತಿ ಓದುತ್ತಿದ್ದಾಳೆ. ಘಟನೆ ಕುರಿತು ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.