ಚಾಮರಾಜನಗರ: ನಗರದ ಇಂದಿರಾ ಕ್ಯಾಂಟೀನ್ನಲ್ಲಿ ಬೆಳಗಿನ ಉಪಹಾರ ಪಡೆಯಲು ಜನ ನಾ ಮುಂದು ತಾ ಮುಂದು ಎಂದು ಮುಗಿಬಿದ್ದ ದೃಶ್ಯ ಕಂಡು ಬಂತು.
ಲಾಕ್ಡೌನ್ ಹಿನ್ನೆಲೆ ಮೇ 11ರಿಂದ 24ರವರೆಗೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ಗಳಲ್ಲಿ ಉಚಿತ ಆಹಾರ ವಿತರಣೆಗೆ ಪೌರಾಡಳಿತ ಇಲಾಖೆ ಆದೇಶ ನೀಡಿದೆ. ಹೀಗಾಗಿ, ಜನ ಆಹಾರ ಪಡೆಯಲು ಮುಗಿಬೀಳುತ್ತಿದ್ದಾರೆ. ಇಂದು ಬೆಳಗ್ಗೆ ನಗರದ ಇಂದಿರಾ ಕ್ಯಾಂಟೀನ್ನಲ್ಲಿ ಅರ್ಧ ಗಂಟೆಯಲ್ಲಿ 625 ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. ಲಾಕ್ಡೌನ್ಗಿಂತ ಮೊದಲು ಮಧ್ಯಾಹ್ನವಾದರೂ ಮುಗಿಯದ ಉಪಹಾರ, ಈಗ ಅರ್ಧ ತಾಸಿನಲ್ಲಿ ಖಾಲಿಯಾಗುತ್ತಿದೆ ಎಂದು ಕ್ಯಾಂಟೀನ್ ಸಿಬ್ಬಂದಿ ತಿಳಿಸಿದ್ದಾರೆ.
ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ: ರಾಜ್ಯದಲ್ಲಿ ಲಾಕ್ಡೌನ್ ಘೋಷಣೆಯಾಗಿ ನಾಲ್ಕು ದಿನ ಕಳೆದಿದ್ದು, ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾರದಲ್ಲಿ ಮೂರು ದಿನ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದ್ದು, ಉಳಿದ ನಾಲ್ಕು ದಿನ ಸಂಪೂರ್ಣ ಬಂದ್ ಘೋಷಣೆ ಮಾಡಿದ ಜಿಲ್ಲಾಡಳಿತ ಆದೇಶ ನೀಡಿದೆ.
ಓದಿ : ಶಿವಮೊಗ್ಗದ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತವಾಗಿ ಊಟ, ಉಪಾಹಾರ ನೀಡಲಾಗುತ್ತಿದೆ: ಸುನೀತಾ ಅಣ್ಣಪ್ಪ
ಇಂದು ಬೆಳಗ್ಗೆಯಿಂದಲೇ ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಆಗಿತ್ತು. ಬೆರಳೆಣಿಕೆಯಷ್ಟು ಜನ ಮಾತ್ರ ಸಂಚಾರ ನಡೆಸುತ್ತಿರುವುದು ಕಂಡುಬಂತು. ನಗರದ ಎಲ್ಲಾ ರಸ್ತೆಗಳು ಖಾಲಿ ಖಾಲಿಯಾಗಿದ್ದು, ಮೆಡಿಕಲ್ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಅಂಗಡಿಗಳನ್ನು ತೆರೆಯಲು ನಿಗದಿತ ಅವಧಿಯಲ್ಲಿ ಅವಕಾಶ ನೀಡಲಾಗಿದೆ.