ಗುಂಡ್ಲುಪೇಟೆ (ಚಾಮರಾಜನಗರ): ತೆರಕಣಾಂಬಿ ಕಾಲೇಜು ಸ್ಥಳಾಂತರ ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ರೈತ ಸಂಘದವರು ನಡೆಸುತ್ತಿರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್, ಶಾಸಕ ಸಿ.ಎಸ್. ನಿರಂಜನ ಕುಮಾರ್ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಆಗಮಿಸಬೇಕು. ಕಾಲೇಜು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸುವ ತನಕ ನಾವು ಧರಣಿ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಈ ವೇಳೆ ಪ್ರತಿಭಟನಾನಿರತ ವಿದ್ಯಾರ್ಥಿನಿ ದ್ವಿತೀಯ ಬಿ.ಎ. ವ್ಯಾಸಂಗ ಮಾಡುತ್ತಿರುವ ರಕ್ಷಿತಾ. ಬಿ. ಮಾತನಾಡಿ, ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದರೂ ನಮ್ಮ ಸಮಸ್ಯೆ ಕೇಳಲು ಶಾಸಕರು, ಸಚಿವರು ಸೇರಿದಂತೆ ಯಾರೂ ಕೂಡ ಆಗಮಿಸಿಲ್ಲ. ಈ ಹಿನ್ನೆಲೆಯಲ್ಲಿ ಕಾಲೇಜು ಸ್ಥಳಾಂತರ ಆದೇಶ ಹಿಂಪಡೆಯುವವರೆಗೂ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ. ಇಂದು ಶಾಂತಿಯುತ ಹೋರಾಟ, ನಾಳೆ ಉಗ್ರ ರೂಪ ಪಡೆದುಕೊಳ್ಳುತ್ತದೆ. ಅದಕ್ಕೂ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾ ಸಂದರ್ಭದಲ್ಲಿ ಮತ ಕೇಳಲು ಮನೆ ಮನೆಗೆ ಆಗಮಿಸುವ ಶಾಸಕರು, ಇಂದು ಹೆಣ್ಣು ಮಕ್ಕಳು ರಸ್ತೆಯಲ್ಲಿ ಕುಳಿತಿದ್ದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ವರಮಹಾಲಲಕ್ಷ್ಮೀ ಹಬ್ಬ ಮಾಡಬೇಕಾದ ನಾವು ಇಂದು ಇಲ್ಲಿ ಕುಳಿತು ಕಾಲೇಜು ಉಳಿಸಿಕೊಳ್ಳಲು ಪ್ರತಿಭಟನೆ ನಡೆಸುತ್ತಿರುವುದು ದುರದೃಷ್ಟಕರ. ಸಚಿವರು, ಶಾಸಕರ ಮನೆಯ ಮಕ್ಕಳು ಈ ರೀತಿ ನಡು ರಸ್ತೆಯಲ್ಲಿ ಕುಳಿತಿದ್ದರೆ ಅವರು ಸುಮ್ಮನೆ ಇರುತ್ತಿದ್ದರಾ..? ಉಳ್ಳವರಿಗೊಂದು ನ್ಯಾಯ ಬಡವರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದರು.
ಪ್ರತಿಭಟನಾ ಸ್ಥಳದಲ್ಲೇ ವಿದ್ಯಾರ್ಥಿಗಳ ಓದು:
ತೆರಕಣಾಂಬಿಯ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ನಡೆಯುತ್ತಿರುವ ಪ್ರತಿಭಟನಾ ಸ್ಥಳದಲ್ಲೇ, ವಿದ್ಯಾರ್ಥಿಗಳು ಓದುವ ಮೂಲಕ ಗಮನ ಸೆಳೆದರು. ಕಾಲೇಜು ಉಳಿವಿಗಾಗಿ ಶ್ರಮಿಸುತ್ತಿರುವ ವಿದ್ಯಾರ್ಥಿಗಳು, ಪ್ರತಿಭಟನೆ ಸ್ಥಳದಲ್ಲೇ ಊಟ ತಿಂಡಿ ತಯಾರಿಸಿ ಭೋಜನ ಮಾಡಿದರು.
ರೈತ ಸಂಘ ಸಾಥ್:
ಪ್ರತಿಭಟನಾ ವಿದ್ಯಾರ್ಥಿಗಳಿಗೆ ಕರ್ನಾಟಕ ರೈತ ಸಂಘ ಸಾಥ್ ನೀಡಿದ್ದು, ವಿದ್ಯಾರ್ಥಿಗಳ ಜತೆ ಅವರೂ ಕೂಡ ಧರಣಿ ಮುಂದುವರಿಸಿದ್ದಾರೆ. ಕಾಲೇಜು ಸ್ಥಳಾಂತರ ಆದೇಶ ಹಿಂಪಡೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಪ್ರತಿಭಟನೆಯಲ್ಲಿ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ, ತಾಲ್ಲೂಕು ಅಧ್ಯಕ್ಷ ಶಿವಮಲ್ಲು, ಶಾಂತ ಮಲ್ಲಪ್ಪ, ಮೂಡ್ನಕೂಡು ಮಹೇಶ, ಉಮೇಶ, ವಿದ್ಯಾರ್ಥಿಗಳಾದ ದೇವಿಶ್ರೀ, ಅವಿನಾಶ್, ವಿನಾಯಕ ಸೇರಿದಂತೆ ತೆರಕಣಾಂಬಿ ಗ್ರಾಮಸ್ಥರು ಹಾಜರಿದ್ದರು.