ಚಾಮರಾಜನಗರ: ಅಕ್ರಮ-ಸಕ್ರಮ ಗಣಿಗಾರಿಕೆ ಪತ್ತೆಹಚ್ಚಲು ಒಂದು ತಿಂಗಳ ಕಾಲ ಎಲ್ಲ ರೀತಿಯ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.
ಗುಂಡ್ಲುಪೇಟೆ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಕ್ರಮವಾಗಿ ಮತ್ತು ಅವೈಜ್ಞಾನಿಕವಾಗಿ ಭೂಗರ್ಭವನ್ನು ದೋಚುತ್ತಿರುವುದನ್ನು ತಡೆಯುವ ಉದ್ದೇಶದಿಂದ ಡಿಸಿ ಚಾರುಲತಾ ಸೋಮಲ್ ನೇತೃತ್ವದ ತಂಡವನ್ನು ರೂಪಿಸಿದ್ದು, ಎಲ್ಲ ಗಣಿಗಾರಿಕೆ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ.
ಕಾನೂನಾತ್ಮಕವಾಗಿ ಇದ್ದರೆ ಗಣಿಗಾರಿಕೆ ಮುಂದುವರೆಸುತ್ತಾರೆ, ಇಲ್ಲದಿದ್ದರೆ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಂಡು ಕ್ವಾರಿಗಳನ್ನು ಬಂದ್ ಮಾಡಿಸಲಾಗುತ್ತದೆ. ಈ ಮೈನಿಂಗ್ ಮಾಫಿಯಾ ವಿರುದ್ಧದ ಆಪರೇಷನ್ ಒಂದು ತಿಂಗಳೊಳಗೆ ಪೂರ್ಣ ಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಗಣಿಗಳ ದಾಖಲೆ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯು ನಾಳೆ ಬೆಳಗ್ಗೆಯಿಂದಲೇ ಕಾರ್ಯರಂಭ ಮಾಡಲಿದೆ. ಪ್ರತಿ ತಾಲೂಕಿನ ಎಲ್ಲ ಗಣಿಗಳಿಗೂ ಜಿಲ್ಲಾಧಿಕಾರಿ ನೇತೃತ್ವದ ತಂಡ ತೆರಳುತ್ತದೆ. ಪ್ರಭಾವಿ ವ್ಯಕ್ತಿ ಅಥವಾ ಯಾರದ್ದೇ ಪ್ರಭಾವವಿದ್ದರೂ ಕಾನೂನಡಿ ಕ್ರಮ ಕೈಗೊಳ್ಳಲಿದ್ದು, ಯಾರ ಹಸ್ತಕ್ಷೇಪವೂ ಇರುವುದಿಲ್ಲ. ಡಿಸಿ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು.
ಮಡಹಳ್ಳಿ ಕ್ವಾರಿ ಶಾಶ್ವತ ಸ್ಥಗಿತ: ಗುಡ್ಡ ಕುಸಿದು ಕಾರ್ಮಿಕರು ಸಿಲುಕಿರುವ ಮಡಹಳ್ಳಿ ಕ್ವಾರಿ ಶಾಶ್ವತವಾಗಿ ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಸೂಚಿಸಿಲಾಗಿದೆ. ಪರವಾನಗಿ ಪಡೆದಿದ್ದ ಮಹೇಂದ್ರಪ್ಪ ಅವರ ಲೈಸೆನ್ಸ್ ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನಾನು ಕೀವ್ನಲ್ಲಿಯೇ ಇದ್ದೇನೆ, ಪಲಾಯನ ಮಾಡಿಲ್ಲ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
ಮಹೇಂದ್ರಪ್ಪ ಕೇರಳ ಉದ್ಯಮಿ ಅಕೀಂ ಎಂಬಾತನಿಗೆ ಉಪ ಗುತ್ತಿಗೆ ಕೊಟ್ಟಿದ್ದು, ಕಾನೂನಿನಡಿ ಇದನ್ನು ಪರಿಶೀಲಿಸಲಾಗುವುದು. ಮಹೇಂದ್ರಪ್ಪ, ಅಕೀಂ ಹಾಗೂ ಕ್ವಾರಿ ಮ್ಯಾನೇಜರ್ ನವೀದ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ನವೀದ್ ಎಂಬಾತನನ್ನು ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ತಂಡವೊಂದನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.