ಚಾಮರಾಜನಗರ : ಬಂಡೀಪುರ ಅಭಯಾರಣ್ಯದಲ್ಲಿ ಪ್ಲಾಸ್ಟಿಕ್ ಕಂಟಕ ಹೆಚ್ಚಾಗುತ್ತಿದ್ದು, ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗಳು ಅಲ್ಲಲ್ಲಿ ಕಸವನ್ನು ಹಾಕುತ್ತಿದ್ದು, ಎರಡೇ ವಾರಕ್ಕೆ ಟ್ರ್ಯಾಕ್ಟರ್ನಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂದು ಕಸ ವಿಲೇವಾರಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಊಟಿ, ವೈನಾಡು, ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ಕೊಡುವ ಪ್ರವಾಸಿಗರು ನೀರಿನ ಬಾಟೆಲ್, ತಿಂಡಿ, ತಿನಿಸಿನ ಪ್ಲಾಸ್ಟಿಕ್ ಕವರ್ಗಳನ್ನು ಅಲ್ಲಲ್ಲಿಯೇ ಬೀಸಾಡುತ್ತಿದ್ದು, ರಾಶಿ ರಾಶಿ ಕಸ ಅಲ್ಲಲ್ಲಿ ತುಂಬಿಕೊಂಡಿದೆ. ಈ ಕಸವನ್ನು ಆಯಲೆಂದೇ 10 ಮಂದಿ ಕೆಲಸಗಾರರನ್ನು ನಿಯೋಜನೆಗೊಳಿಸಲಾಗಿದ್ದು, ಬಂಡೀಪುರ ವಲಯದಲ್ಲಿ ನಾಲ್ವರು, ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ನಾಲ್ವರು ಮತ್ತು ಇಬ್ಬರು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ.
ಹೆಚ್ಚುತ್ತಿದೆ ದಂಡದ ಮೊತ್ತ:
ಕಾಡಿಗೆ ಪ್ಲಾಸ್ಟಿಕ್ ಕಂಟಕವಾಗುತ್ತಿರುವ ಕುರಿತು ಬಂಡೀಪುರ ಹುಲಿ ಯೋಜನೆ ಸಿಎಫ್ಒ ಬಾಲಚಂದ್ರ ಈಟಿವಿ ಭಾರತ್ನೊಂದಿಗೆ ಮಾತನಾಡಿ, ರಸ್ತೆ ಪಕ್ಕ ಕಸ ಬಿಸಾಡುವರು, ಸೆಲ್ಪಿ ಕ್ಲಿಕ್ಕಿಸುವುದು, ತಿಂಡಿ ತಿನಿಸು ನೀಡುವವರಿಗೆ ದಂಡ ವಿಧಿಸಿ ಮುಂದೆಂದೂ ಈ ತಪ್ಪನ್ನು ಮಾಡದಂತೆ ಅರಿವು ಮೂಡಿಸಲಾಗುತ್ತಿದೆ. ಎರಡೂವರೆ ತಿಂಗಳಿಗೆ 4 ಲಕ್ಷದ 19 ಸಾವಿರ ರೂ. ಹಣ ಸಂಗ್ರಹವಾಗಿದೆ. ನಮ್ಮದು ದಂಡ ಸಂಗ್ರಹಿಸುವ ಉದ್ದೇಶವಲ್ಲ. ಅವರು ಮುಂದೆ ಈ ರೀತಿಯ ತಪ್ಪನ್ನು ಮಾಡಬಾರದು ಎಂಬುದು ನಮ್ಮ ಆಶಯವಾಗಿದೆ ಎಂದರು.
ಕಾಡಿನಲ್ಲಿ ಶೀಘ್ರವೇ ನೋ ಪ್ಲಾಸ್ಟಿಕ್ ಜಾಗೃತಿ ಅಭಿಯಾನ ಹಮ್ಮಿಕೊಂಡು ಕನ್ನಡ, ಇಂಗ್ಲಿಷ್ ಮತ್ತು ತಮಿಳಿನಲ್ಲಿ ಸಂದೇಶ ಇರುವ ಕರಪತ್ರಗಳನ್ನು ಹಂಚಬೇಕೆಂದು ಚಿಂತನೆ ನಡೆಸಲಾಗಿದೆ. ಅದನ್ನು ಓದಿಯಾದರೂ ಕಾಡಿನ ರಸ್ತೆಬದಿಗಳಲ್ಲಿ ಕಸ ಬಿಸಾಡದಿರಲಿ ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.