ಚಾಮರಾಜನಗರ: ಉತ್ತಮ ಆರೋಗ್ಯ ಸೇವೆ ಇಲ್ಲಿನವರಿಗೆ ಮರೀಚಿಕೆ ಆಗಿದ್ದು, ಗರ್ಭಿಣಿಯರು-ಬಾಣಂತಿಯರ ಆರೈಕೆ ಕಷ್ಟಸಾಧ್ಯವಾಗಿದೆ. ಹೆರಿಗೆಯ ದಿನ ಹತ್ತಿರ ಬಂದರೆ ಬೇರೆ ಊರಿನಲ್ಲಿ ಬಾಡಿಗೆ ಮನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಹಲವಾರು ಕುಗ್ರಾಮಗಳಲ್ಲಿ ಸರ್ಕಾರದ ಆರೋಗ್ಯ ಸೇವೆ ಮರೀಚಿಕೆಯಾಗಿದೆ. ಈಗಲೂ ಆರೋಗ್ಯ ಹದಗೆಟ್ಟರೆ ಔಷಧಿಗಾಗಿ ಪರಿತಪಿಸುವ ಪರಿಸ್ಥಿತಿ ಬೆಟ್ಟದ ತಪ್ಪಲಿನ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ನಿರ್ಮಾಣವಾಗಿದೆ. ದೊಡ್ಡಾನೆ, ತೋಕೆರೆ, ಪಡಿಸಲನತ್ತ ಮುಂತಾದ ಗ್ರಾಮಗಳಲ್ಲಿ ಗರ್ಭಿಣಿಯರು ಮಾರ್ಟಳ್ಳಿ, ಸುಳ್ವಾಡಿ, ರಾಮಾಪುರ ಮುಂತಾದ ಊರುಗಳಲ್ಲಿನ ಸಂಬಂಧಿಕರ ಮನೆಯಲ್ಲಿ, ಇಲ್ಲವಾದರೆ ಬಾಡಿಗೆ ಮನೆಯಲ್ಲಿದ್ದು ಹೆರಿಗೆಯಾದ ಬಳಿಕ ಜೋಲಿ ಮೂಲಕ ಸ್ವಗ್ರಾಮಕ್ಕೆ ತೆರಳುತ್ತಾರೆ.
ಅನೂಕಲಸ್ಥರಿಗೆ ಮನೆ-ಬಡವರಿಗೆ ಜೋಲಿಯೇ ಗತಿ: ಅನೂಕೂಲಸ್ಥರು, ಸಂಬಂಧಿಕರಿದ್ದವರಷ್ಟೇ ಮಾರ್ಟಳ್ಳಿ, ಸುಳ್ವಾಡಿಯಲ್ಲಿ ಬಂದು ಉಳಿಯುತ್ತಾರೆ. ಬಡವರು ಹೆರಿಗೆ ದಿನ ಹತ್ತಿರ ಬಂದಾಗ ಜೋಲಿಯ ಮೂಲಕವೇ ಬರಬೇಕು. ಕೆಲವರು ಬರುತ್ತಿರುವಾಗಲೇ ಹೆರಿಗೆ ನೋವು ಕಾಣಿಸಿಕೊಂಡು ಮಾರ್ಗ ಮಧ್ಯದಲ್ಲೇ ಮಕ್ಕಳಿಗೆ ಜನ್ಮ ನೀಡಿದ ನಿದರ್ಶನವೂ ಇದೆ ಎಂದು ಮಾರ್ಟಳ್ಳಿಯ ಸಮಾಜ ಸೇವಕ ಡಾನ್ ಬೋಸ್ಕೊ ತಿಳಿಸಿದರು.
ವೃದ್ಧರಿಗೆ ಆರೋಗ್ಯ ಹದಗೆಟ್ಟಾಗ, ಕಾಡುಪ್ರಾಣಿಗಳ ದಾಳಿಯಾದಾಗ ಮಹದೇಶ್ವರ ಬೆಟ್ಟ ಗ್ರಾ.ಪಂಗೆ ಒಳಪಡುವ ಹಲವಾರು ಗ್ರಾಮಗಳು ಜೋಲಿಯನ್ನೇ ಇಂದಿಗೂ ಆಶ್ರಯಿಸಿವೆ. ರಸ್ತೆಯಿಲ್ಲದೆ ವಾಹನಗಳು ಓಡಾಡದಲಾಗದಿರುವುದರಿಂದ ಜನರು ನಡಿಗೆಯನ್ನೇ ಆಶ್ರಯಿಸಬೇಕು. ತಲೆ ಮೇಲೆ, ಕತ್ತೆ ಮೇಲೆ ವಸ್ತುಗಳನ್ನು ಸಾಗಿಸುತ್ತಾರೆ ಎಂದು ಬೋಸ್ಕೊ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.
ಇನ್ನು ಒಡಿಪಿ ಸಂಸ್ಥೆಯ ಲಿಲ್ಲಿ ಮೇರಿ(ಸ್ಥಳೀಯರು) ಪ್ರತಿಕ್ರಿಯಿಸಿ, ಮಹದೇಶ್ವರ ಬೆಟ್ಟ ಗ್ರಾಪಂಗೆ ಒಳಪಡುವ ಗ್ರಾಮಗಳಿಗೆ ಆರೋಗ್ಯ ಸೇವೆ ಎಂಬುದು ನಿಲುಕದ ರೀತಿಯಲ್ಲಿದೆ. ಅರಣ್ಯ ಇಲಾಖೆ ಪ್ರಾಣಿಗಳ ಮೇಲೆ ತೋರುವ ಕಾಳಜಿಯನ್ನು ಮನುಷ್ಯರ ಮೇಲೂ ತೋರಿಸಿದ್ದರೆ ಅವರ ಜೀವನ ಎಷ್ಟೋ ಸುಧಾರಿಸುತ್ತಿತ್ತು. ಸೂಕ್ತ ರಸ್ತೆ ನಿರ್ಮಾಣ ಆದರೆ ಬಹುಪಾಲು ಸಮಸ್ಯೆ ನೀಗಲಿದೆ. ರಸ್ತೆ ಇಲ್ಲದೆ ಕಾಡು ಹಾದಿಯಲ್ಲಿ ಬೆಟ್ಟಗಳನ್ನು ಹತ್ತಿಳಿದು ಹೋಗಬೇಕಿರುವುದೇ ಇದಕ್ಕೆಲ್ಲಾ ಕಾರಣ. ಗರ್ಭಿಣಿಯರು, ವೃದ್ಧರು ಜೋಲಿ ಮೂಲಕವೇ ಬರಬೇಕಿದೆ. ಕೆಲವರು ಬಾಡಿಗೆ ಮನೆ ಮಾಡಿ ಬಾಣಂತನ ಮುಗಿಸಿ ತೆರಳುತ್ತಾರೆ ಎಂದು ತಿಳಿಸಿದರು.
ಸರ್ವರಿಗೂ ಆರೋಗ್ಯ ಸೇವೆ ಎಂದು ಹೇಳುತ್ತಿರುವ ಸರ್ಕಾರ ಮಹದೇಶ್ವರ ಬೆಟ್ಟದ ಗ್ರಾಪಂನ ಊರುಗಳನ್ನು ಮರೆತಂತಿದ್ದು, ಅರಣ್ಯ ಇಲಾಖೆ ಜೊತೆಗೂಡಿ ಕನಿಷ್ಠ ಮೂಲ ಸೌಕರ್ಯ ಕಲ್ಪಿಸುವತ್ತ ಗಮನ ಹರಿಸಬೇಕಿದೆ. ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಉಸ್ತುವಾರಿ ಸಚಿವರಾಗುವ ಮೊದಲೇ ದೊಡ್ಡಾನೆಗೆ ಭೇಟಿ ಕೊಟ್ಟು ಸಮಸ್ಯೆಯ ನೈಜ ದರ್ಶನ ಅರಿತಿದ್ದರು. ಈಗ ಅವರು ಉಸ್ತುವಾರಿಯಾಗಿ ಒಂದು ವರ್ಷವಾಗುತ್ತಿದ್ದು, ಇನ್ನಾದರೂ ಕುಗ್ರಾಮಗಳ ಜನರು ನಿಶ್ಚಿಂತೆಯಿಂದ ಬಾಳ್ವೆ ಮಾಡುವಂತೆ ವ್ಯವಸ್ಥೆ ಕಲ್ಪಿಸಿಕೊಡಲು ಮನಸ್ಸು ಮಾಡಬೇಕಿದೆ.