ಚಾಮರಾಜನಗರ : ಲಾಕ್ಡೌನ್ ಸಡಿಲಿಕೆಯಾಗಿ ಇಂದಿನಿಂದ ಮದ್ಯದಂಗಡಿಗಳು ತೆರೆಯುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯ ಕ್ರಮಕೈಗೊಳ್ಳಲಾಗಿದೆ.
ಒಂದೂವರೆ ತಿಂಗಳಿನ ಬಳಿಕ ಮದ್ಯದಂಗಡಿಗಳು ತೆರೆಯಲಿರುವುದರಿಂದ ಜನದಟ್ಟನೆ ಆಗುವ ಸಾಧ್ಯತೆ ಹೆಚ್ಚಲಿದೆ. ಹಾಗಾಗಿ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದ ಕಂಬಗಳನ್ನು ಕಟ್ಟಿ ಒಬ್ಬೊಬ್ಬರೇ ಬರುವಂತೆ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ.
ಜಿಲ್ಲೆಯಲ್ಲಿ 13 ಎಂಎಸ್ಐಎಲ್, 76 ವೈನ್ ಶಾಪ್ಗಳಿವೆ. ಬೆಳಗ್ಗೆ 9 ರಿಂದ ಸಂಜೆ 7ರವರೆಗೆ ತೆರೆಯಲಿದ್ದು, ಓರ್ವನಿಗೆ ಗರಿಷ್ಠ 750 ಎಂಎಲ್ ಮದ್ಯ ನೀಡಬೇಕೆಂದು ಡಿಸಿ ಡಾ.ಎಂ ಆರ್ ರವಿ ಸೂಚಿಸಿದ್ದಾರೆ. ಎಲ್ಲಾ ಅಂಗಡಿಗಳಲ್ಲಿ ಸಿಸಿಟಿವಿ ಕಡ್ಡಾಯಗೊಳಿಸಲಾಗಿದೆ. ಕೌಂಟರ್ ತೆರೆದು ಟಿಕೆಟ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸದ್ಯದ ಸ್ಟಾಕ್ ಎರಡು ದಿನದವರೆಗೆ ಮದ್ಯ ಪೂರೈಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.