ಚಾಮರಾಜನಗರ: ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅಲೆಮಾರಿಯಾಗಿದ್ದು, ಮುಂದಿನ ಚುನಾವಣೆಯಲ್ಲಿ ಡಿಕೆಶಿ ಗೆಲ್ತಾರೋ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.
ಅಂಬೇಡ್ಕರ್ ಭವನದಲ್ಲಿ ನಡೆದ ಎಸ್ಟಿ ಮೋರ್ಚಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಇಂದಿರಾಗಾಂಧಿ ಹೆಸರಿನಲ್ಲಿ ಲೈಟ್‌ಕಂಬ ನಿಲ್ಲಿಸಿದರೂ ಕಾಂಗ್ರೆಸ್ ಗೆಲ್ಲುತ್ತದೆ ಎನ್ನುವ ಭಾವನೆಯಿತ್ತು. ಆದರೀಗ ಅವರ ಮೊಮ್ಮಗ ರಾಹುಲ್ ಗಾಂಧಿಯೇ ಕೇರಳಕ್ಕೆ ಬಂದು ನಿಲ್ಲುವಂತಾಗಿದೆ. ಸೋನಿಯಾ ಗಾಂಧಿ ಕ್ಷೇತ್ರವನ್ನು ಹುಡುಕುವ ಪರಿಸ್ಥಿತಿ ಬಂದಿದೆ. ಮಲ್ಲಿಕಾರ್ಜುನ ಖರ್ಗೆಯನ್ನು ಮನೆಗೆ ಕಳುಹಿಸಿ ಆಗಿದೆ. ಮೈಸೂರಿನಿಂದ ಸಿದ್ದರಾಮಯ್ಯ ಅವರನ್ನು ಗುಡಿಸಿ ಹಾಕಲಾಗಿದೆ. ಮುಂದಿನ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಗೆಲ್ಲುತ್ತಾರೋ ಗೊತ್ತಿಲ್ಲ. ಎಲ್ಲೋ ಒಂದು ಕಡೆ ಜಾಗ ಹುಡುಕಿಕೊಂಡಿರುವ ಸಿದ್ದರಾಮಯ್ಯ ಈಗ ಕಾಂಗ್ರೆಸ್‌ನಲ್ಲಿ ಅಲೆಮಾರಿಯಾಗಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ತನ್ನ ಭ್ರಷ್ಟಾಚಾರ, ಅಹಂಕಾರ ಹಾಗೂ ದರ್ಪದ ರಾಜಕಾರಣದಿಂದ ಇಂದು ಹೀನಾಯ ಸ್ಥಿತಿಗೆ ತಲುಪಿದೆ. ಪರಿಶಿಷ್ಟ ಜಾತಿ, ಪಂಗಡದ ಜನರ ಕುರಿತು ಕಣ್ಣಿರು ಹಾಕಿದ ಕಾಂಗ್ರೆಸ್, ಅಧಿಕಾರ ಸಿಕ್ಕಾಗ ಅವರನ್ನು ಕಡೆಗಣಿಸಿತು. ಅಲ್ಪಸಂಖ್ಯಾತರನ್ನು ಮತ ಬ್ಯಾಂಕ್ ಆಗಿ ಮಾಡಿಕೊಂಡ ಕಾಂಗ್ರೆಸ್ ಅವರಿಗೆ ಶಿಕ್ಷಣ, ಉದ್ಯೋಗ ಕೊಡಲಿಲ್ಲ. ಮಲ್ಲಿಕಾರ್ಜುನ ಖರ್ಗೆಯನ್ನು ಮನೆಯೊಳಗೆ ಹಾಕಿದರು. ಪರಮೇಶ್ವರ್ ಅವರನ್ನು ಬದಿಗೆ ಸರಿಸಿದರು ಎಂದು ಆಪಾದಿಸಿದರು.