ಕೊಳ್ಳೇಗಾಲ: ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ತನಿಖಾಧಿಕಾರಿ ನೇಮಿಸಿದ್ದು, ಪ್ರಾಮಾಣಿಕವಾಗಿ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದು ಶಾಸಕ ಎನ್.ಮಹೇಶ್ ಒತ್ತಾಯಿಸಿದ್ದಾರೆ.
ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಘಟಿಸಿದ ಆಕ್ಸಿಜನ್ ದುರಂತಕ್ಕೆ ಸಿಲುಕಿ ಅಸುನೀಗಿದ 24 ಮಂದಿ ಪೈಕಿ ಇಬ್ಬರು ಕೊಳ್ಳೇಗಾಲಕ್ಕೆ ಸೇರಿದವರರಾಗಿದ್ದಾರೆ. ಈ ಹಿನ್ನೆಲೆ ಮೃತಪಟ್ಟ ತಿಮ್ಮರಾಜೀಪುರ ಗ್ರಾಮದ ಯುವತಿ ಕೀರ್ತನ(18) ಹಾಗೂ ಮುಡಿಗುಂಡದ ಶಿವಣ್ಣ(88) ಎಂಬುವರ ಮನೆಗೆ ಶಾಸಕ ಎನ್.ಮಹೇಶ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಕೈಲಾದಷ್ಟು ಆರ್ಥಿಕ ಸಹಾಯ ಮಾಡಿದ್ದಾರೆ.
ಈ ವೇಳೆ, ಮೃತ ಕೀರ್ತನ ಪೋಷಕರು ಶಾಸಕರ ಎದುರು ನನ್ನ ಮಗಳಿಗೆ ಸರಿಯಾದ ಚಿಕಿತ್ಸೆ ಸಿಗದ ಕಾರಣ ಇವತ್ತು ಅವಳಿಲ್ಲ ಎಂದು ಕಣ್ಣೀರು ಹಾಕಿ ಗೋಳಾಡಿದ ಘಟನೆ ನಡೆಯಿತು. ನಂತರ ಶಾಸಕರು ಪೋಷಕರಿಗೆ ಸಾಂತ್ವನ ಹೇಳಿ ಸಮಾಧಾನ ಪಡಿಸಿದರು. ಈ ಅನ್ಯಾಯ ಮತ್ಯಾರಿಗೂ ಆಗದಂತೆ ನೋಡಿಕೊಳ್ಳಿ ಎಂದು ಕಣ್ಣೀರಿಡುತ್ತ ಪೋಷಕರು ಹೇಳಿದರು.
ತಹಶೀಲ್ದಾರ್ ಕುನಾಲ್ ಅವರಿಗೆ ಈ ಕೂಡಲೇ ಮೃತರ ಕುಟುಂಬದ ಸದಸ್ಯರನ್ನು ಕೊರೊನಾ ತಪಾಸಣೆಗೆ ಒಳಪಡಿಸಬೇಕು. ವರದಿ ಏನು ಬರುತ್ತೋ ನೋಡಿ ನನಗೆ ಮಾಹಿತಿ ನೀಡಬೇಕೆಂದು ಸೂಚನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ದುರ್ಘಟನೆಗೆ ಸಂಬಂಧಿಸಿದಂತೆ 24 ಮಂದಿ ಸಾವನ್ನಪ್ಪಿದ್ದು. ಅವರಲ್ಲಿ ಇಬ್ಬರು ಕೊಳ್ಳೇಗಾಲದವರಾಗಿದ್ದಾರೆ. ಕಿರ್ತನ ಎಂಬ ಯುವತಿ ಸುಮಾರು ರಾತ್ರಿ 1 ಗಂಟೆ 52 ನಿಮಿಷದಲ್ಲಿ ಅಸುನೀಗಿದ್ದಾಳೆ ಎಂದು ತಿಳಿದು ಬಂದಿದೆ. ಈ ಸಮಯದಲ್ಲಿ ಆಕ್ಸಿಜನ್ ಕೊರತೆಯಿಂದಲೇ ಸತ್ತಿರುವುದು ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ. ಈ ಮಗುವಿನ ಸಾವಿಗೆ ಆಕ್ಸಿಜನ್ ಕೊರತೆಯೇ ಕಾರಣ ಎಂಬುದನ್ನು ಖಡಾಖಂಡಿತವಾಗಿ ಹೇಳಬಹುದಾಗಿದೆ. ಈ ಹಿನ್ನೆಲೆ 24 ಜನರ ಪೈಕಿ ಆಕ್ಸಿಜನ್ ಸಿಗದೇ ಒಬ್ಬರೂ ಸತ್ತಿದ್ದರೂ ಅದು ಅಪರಾಧ, ಅನ್ಯಾಯ. ಆದ್ದರಿಂದ ಪ್ರಮಾಣಿಕವಾಗಿ ಈ ಬಗ್ಗೆ ತನಿಖೆಯಾಗಬೇಕು ಜಿಲ್ಲಾಡಳಿತವೇ ಆಗಲಿ, ಆರೋಗ್ಯ ಇಲಾಖೆ ಆಗಲಿ, ಈ ಘಟನೆಗೆ ಕಾರಣವಾಗಿದ್ದರೆ ಮುಲಾಜಿಲ್ಲದೇ ಶಿಸ್ತು ಕ್ರಮ ಜರುಗಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇದು ಎಚ್ಚರಿಗೆ ಗಂಟೆಯಾಗಿದ್ದು ಇನ್ನೂ ಎಲ್ಲೂ ಇಂತಹ ಘಟನೆ ಮರುಕಳಿಸಬಾರದು. ಸರ್ಕಾರ ಕೋವಿಡ್ ಆಸ್ಪತ್ರೆಗಳಿಗೆ ವೈದ್ಯಕೀಯ ಸೌಲಭ್ಯಗಳನ್ನು ಸಕಾಲದಲ್ಲಿ ನೀಡಬೇಕು.ಆಕ್ಸಿಜನ್ ದುರಂತದಿಂದ ಪ್ರಾಣಬಿಟ್ಟ ಕುಟುಂಬದವರಿಗೆ ಆರ್ಥಿಕ ಪರಿಹಾರ ನೀಡಬೇಕೆಂದು ಹೇಳಿದ್ರು.