ಚಾಮರಾಜನಗರ: ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ 9 ಕಾಲೇಜುಗಳ ಸ್ವಾಯತ್ತತೆಯನ್ನು ಮುಂದುವರಿಸುವುದು, ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರಕ್ಕೆ 30 ಮಂದಿ ಖಾಯಂ ಬೋಧಕರ ನೇಮಕ ಮಾಡಿಕೊಳ್ಳಲು ಸರ್ಕಾರಕ್ಕೆ ಶಾಸನಬದ್ಧ (ಸ್ಟ್ಯಾಚೂಟ್) ಪ್ರಸ್ತಾವನೆ ಸಲ್ಲಿಸಲು ಮಂಗಳವಾರ ತೀರ್ಮಾನಿಸಲಾಯಿತು.
ನಗರದ ಹೊರವಲಯದ ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ಸಿಂಡಿಕೇಟ್ ಸಭೆ ಆಯೋಜಿಸಲಾಗಿತ್ತು. ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಿಂಡಿಕೇಟ್ ಸದಸ್ಯರು ಈ ನಿರ್ಧಾರ ಕೈಗೊಂಡಿದ್ದಾರೆ.
ಗಡಿ ಜಿಲ್ಲೆಯಾಗಿರುವ ಚಾಮರಾಜನಗರದ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ 30 ಖಾಯಂ ಪ್ರಾಧ್ಯಾಪಕರ ನೇಮಕ ಮಾಡಲು ಸರ್ಕಾರಕ್ಕೆ ವಿಶೇಷ ಮನವಿ ಮಾಡುವುದು, ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜು ಮತ್ತು ಸರ್ಕಾರಿ ಮಹಾವಿದ್ಯಾಲಯ ಕಾಲೇಜು, ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜು, ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಜೆಎಸ್‌ಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಜೆಎಸ್‌ಎಸ್ ಮಹಿಳಾ ಕಾಲೇಜು, ಸೇಂಟ್ ಫಿಲೋಮಿನಾ ಕಾಲೇಜು, ಹಾಸನದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಮತ್ತು ಸರ್ಕಾರಿ ವಿಜ್ಞಾನ ಕಾಲೇಜುಗಳ ಸ್ವಾಯತ್ತತೆ ಮುಂದುವರಿಸಲು ನಿರ್ಧರಿಸಲಾಯಿತು.
2010–11ರಲ್ಲಿ ಆರಂಭವಾದ ಸ್ನಾತಕೋತ್ತರ ಕೇಂದ್ರವು ನಡೆದ ಬಂದ ದಾರಿ, ಅಧ್ಯಯನ ಕೇಂದ್ರ, ವಿದ್ಯಾರ್ಥಿಗಳು, ಆಗಬೇಕಾದ ಅಭಿವೃದ್ಧಿ ಕೆಲಸಗಳ ಕುರಿತು ಕೇಂದ್ರದ ನಿರ್ದೇಶಕ ಪ್ರೊ.ಶಿವಬಸವಯ್ಯ ಅವರು ಪಿಪಿಟಿ ಮೂಲಕ ಸಭೆಗೆ ಮಾಹಿತಿ ನೀಡಿದರು.