ಚಾಮರಾಜನಗರ : ಇಷ್ಟು ದಿನ ನಾವು ಆ ರಥೋತ್ಸವ ಈ ರಥೋತ್ಸವ ಎಂದು ಕೇಳಿದ್ದೆವು. ಈಗ ಸಿದ್ದರಾಮೋತ್ಸವ ಆಚರಿಸುತ್ತಿದ್ದಾರೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಲೇವಡಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಳಿಗಿರಿ ರಥೋತ್ಸವ, ರಾಮನವಮಿ ಉತ್ಸವ ಎಂದೆಲ್ಲ ಕೇಳಿದ್ದೆವು. ಈಗ ಒಂಟಿಕೊಪ್ಪಲ್ ಪಂಚಾಗದಲ್ಲಿ ಸಿದ್ದರಾಮೋತ್ಸವ ಸೇರಿಸೋದು ಒಂದು ಬಾಕಿ, ಪ್ರಚಾರಕ್ಕೆ ಏನೆಲ್ಲಾ ನಾಟಕ ಮಾಡಬೇಕೋ ಅದನ್ನೆಲ್ಲ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಆರಂಭದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಮತ್ತು ಅವರ ಸಮುದಾಯದವರು ಸಿದ್ದರಾಮೋತ್ಸವವನ್ನು ಆಚರಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಆದರೆ, ಈ ಬಗ್ಗೆ ಪಕ್ಷದಲ್ಲೇ ಭಿನ್ನಾಭಿಪ್ರಾಯ ಬಂದಿದ್ದರಿಂದ ದೊಡ್ಡ ಸಮಿತಿಯೊಂದನ್ನು ರಚಿಸಿಕೊಂಡು ಪಕ್ಷದ ವತಿಯಿಂದಲೇ ಸಿದ್ದರಾಮೋತ್ಸವ ಮಾಡುತ್ತಿದ್ದಾರೆ ಎಂದು ಹೇಳಿದರು.
ಪ್ರಧಾನಿ ಮೋದಿ ತೊಲಗಿದರೆ ದೇಶ ಉದ್ಧಾರ ಆಗುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು, ಈಗಾಗಲೇ ಸಿದ್ದರಾಮಯ್ಯಗೆ ಜನರು ಪಾಠ ಕಲಿಸಿದ್ದಾರೆ, ಸಿದ್ದರಾಮಯ್ಯಗೆ ಜನರು ಬ್ಯಾಲೆಟ್ ಮೂಲಕ ಉತ್ತರ ನೀಡಿದ್ದಾರೆ. ಹಾಗಾಗಿ ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು. ಸುಮ್ಮನೆ ಅರಚಾಡಿ ಮೈ ಪರಚಿಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಸರ್ವೇ ಪ್ರಕಾರ ಕಾಂಗ್ರೆಸ್ ಗೆ ಅಧಿಕಾರ ಎಂಬ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲವೂ ಜನರಿಗೆ ಗೊತ್ತಿದೆ, ಚುನಾವಣೆ ಬಂದಾಗ ತೋರಿಸುತ್ತಾರೆ. ಆಮೇಲೆ ಸರ್ವೇ ರಿಪೋರ್ಟ್ ಏನಾಗುತ್ತದೆ ನೋಡೋಣ ಎಂದು ಹೇಳಿದರು.
ಓದಿ : ಜೀವದ ಉಳಿವಿಗೆ ಜೀರೋ ಟ್ರಾಫಿಕ್.. ಮುಸ್ಲಿಂ ಯುವಕನ ಹೃದಯ ಬಡಿತಕ್ಕೆ ಚಾಲನೆ ನೀಡಿದ ಹಿಂದೂ ಬಾಲಕಿ