ಚಾಮರಾಜನಗರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಕಾಲದಲ್ಲಿ ಆಮ್ಲಜನಕ ಸಿಗದೆ ಹಲವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಸಮರ್ಪಕವಾಗಿ ಆಕ್ಸಿಜನ್ ಪೂರೈಕೆಯಾಗದೆ ಐಸಿಯುನಲ್ಲಿರುವ 50ಕ್ಕೂ ಹೆಚ್ಚು ಸೋಂಕಿತರು ನರಳಾಡುತ್ತಿದ್ದಾರೆ. ಕೆಲವರು ವಿಡಿಯೋ ಕಾಲ್ ಮೂಲಕ ಕುಟುಂಬಸ್ಥರ ಬಳಿ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆದರೆ ಈ ಬಗ್ಗೆ ನಿನ್ನೆ ತಡರಾತ್ರಿ ಸಂಸದ ಪ್ರತಾಪ್ ಸಿಂಹ ಫೇಸ್‌ಬುಕ್ ಪೋಸ್ಟ್ವೊಂದನ್ನು ಮಾಡಿದ್ದಾರೆ. "ನಾನು ಈಗಷ್ಟೆ ಚಾಮರಾಜನಗರ ಡಿಸಿ ಮತ್ತು ಎಡಿಸಿ ಮೈಸೂರು ಹಾಗೂ ಮೈಸೂರು ಆಕ್ಸಿಜನ್ ಪೂರೈಕೆಯ ಉಸ್ತುವಾರಿ ಹೊಂದಿರುವ ನಾಗರಾಜ್ ಅವರೊಂದಿಗೆ ಕಾನ್ಫರೆನ್ಸ್ ಕಾಲ್ನಲ್ಲಿ ಮಾತನಾಡಿರುವೆ. ನಾವು ಈಗ 50 ಸಿಲಿಂಡರ್‌ಗಳನ್ನು ಒದಗಿಸುತ್ತಿದ್ದೇವೆ. ಏಕೆಂದರೆ ಬೆಳಿಗ್ಗೆ 2 ಗಂಟೆಯ ಹೊತ್ತಿ ಅವರ ಸ್ಟಾಕ್ ಖಾಲಿಯಾಗಿದೆ. ಅವರ ಕೋಟಾದಿಂದ ನಾಳೆ ಆ ಸಿಲಿಂಡರ್‌ಗಳನ್ನು ಹಿಂಪಡೆಯುತ್ತೇವೆ" ಎಂದು ಪೋಸ್ಟ್ ಮಾಡಿದ್ದಾರೆ.
ನಂಜನಗೂಡಿನ ಸೋಂಕಿತರೊಬ್ಬರು ಆಕ್ಸಿಜನ್ ಕೊರತೆ ಉಂಟಾಗಿ ಮೃತಪಟ್ಟಿದ್ದು, ರಾತ್ರಿ ಆಕ್ಸಿಜನ್ ಕೊರತೆಯಿದೆ ಎಂದು ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿ ಹೇಳಿದ್ದರಂತೆ. ಆಕ್ಸಿಜನ್ ಕೊರತೆಯಿಂದ ಸೋಂಕಿತರು ಮೃತಪಟ್ಟಿಲ್ಲ, ಬೇರೆ ಬೇರೆ ಕಾರಣಗಳಿಂದ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ತಿಳಿಸುತ್ತಿದ್ದಾರೆ. ಈ ಎಲ್ಲ ವಿಚಾರಗಳನ್ನು ಗಮನಿಸಿದಾಗ ಆಕ್ಸಿಜನ್ ಕೊರತೆ ಬಗ್ಗೆ ಮುಂಚಿತವಾಗಿಯೇ ಸುಳಿವು ಇದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿತೇ ಎಂಬ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆ: ಕೊರೊನಾ ಸೋಂಕಿತರ ನರಳಾಟ, ಹಲವರು ಸಾವು?