ಚಾಮರಾಜನಗರ: ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎನ್ನುವುದು ಸುಳ್ಳು. ನಮ್ಮ ಬೊಕ್ಕಸ ತುಂಬಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು. ಹನೂರಿನಲ್ಲಿ ಇಂದು ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಣ ಇಲ್ಲ, ಹಣ ಇಲ್ಲಾ ಅಂಥಾ ಯಾರ್ಯಾರೋ ಅನ್ನುತ್ತಾರೆ. ಆದರೆ, ನಮ್ಮ ಸರ್ಕಾರದ ಬೊಕ್ಕಸ ತುಂಬಿದೆ. ಹಿಂದಿನ ಯಾವ ಸರ್ಕಾರದಲ್ಲಿರದಷ್ಟು ಹಣ ನಮ್ಮಲ್ಲಿದೆ. ಹಣ ಇದ್ದುದ್ದರಿಂದಲೇ ಸಾವಿರಾರು ಕೋಟಿ ರೂ ಯೋಜನೆ ಘೋಷಣೆಯಾಗುತ್ತಿದೆ ಮತ್ತು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಕಾಮನ್ ಮ್ಯಾನ್ ಸಿಎಂ. 40 ವರ್ಷಗಳಿಂದ ಒಂದೇ ಮನೆಯಲ್ಲಿದ್ದಾರೆ. ಅವರು ಯಾವ ಮನೆಯನ್ನೂ ಕಟ್ಟಿಕೊಂಡಿಲ್ಲ. ಜನಪರವಾಗಿ, ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿರುವ ರೈತರಿಗೆ ನಮ್ಮ ಸರ್ಕಾರ ಯಾವುದೇ ತೊಂದರೆ ಕೊಡುವುದಿಲ್ಲ. ಶೀಘ್ರದಲ್ಲೇ ಹಕ್ಕುಪತ್ರಗಳನ್ನು ನೀಡುತ್ತೇವೆ. ನಮ್ಮದು ಡಬಲ್ ಎಂಜಿನ್ ಸರ್ಕಾರ. ಎರಡು ಪಟ್ಟು ವೇಗದಲ್ಲಿ ಅಭಿವೃದ್ಧಿ ಎಂದರು.
ಸಚಿವ ಸೋಮಣ್ಣ ಮಾತನಾಡಿ, ಕಾಡೊಳಗಿರುವ ಚಂಗಡಿ ಗ್ರಾಮವನ್ನು ಶೀಘ್ರವೇ ಸ್ಥಳಾಂತರಿಸಲು ರೂಪುರೇಷೆ ಸಿದ್ಧವಾಗುತ್ತಿದೆ. ಆ ಕಾರ್ಯ ತ್ವರಿತವಾಗಿ ಆಗಲಿದೆ. ಯಾವುದೇ ಕಾರಣಕ್ಕೂ ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಬೆರೆಸಬಾರದೆಂದರು.
ಇದನ್ನೂ ಓದಿ: ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತ ಬಿಜೆಪಿ ಮುಖಂಡರು; ಶಿಷ್ಟಾಚಾರ ಉಲ್ಲಂಘನೆ