ಕೊಳ್ಳೇಗಾಲ: ತಾಲ್ಲೂಕಿನ ಚೆಲುವನಹಳ್ಳಿ ಗ್ರಾಮ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ 80 ಲಕ್ಷ ರೂ. ಅನುದಾನ ನೀಡುವಂತೆ ಒತ್ತಾಯಿಸಿ ಸ್ಥಳೀಯ ಶಾಸಕ ಆರ್. ನರೇಂದ್ರ ಖುದ್ದು ಸಚಿವ ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪಟ್ಟಣದ ಲೋಕೋಪಯೋಗಿ ವಿಶ್ರಾಂತಿ ಗೃಹಕ್ಕೆ ಆಗಮಿಸಿದ್ದ ಸಚಿವರನ್ನು ಭೇಟಿ ಮಾಡಿದ ಶಾಸಕ ಆರ್. ನರೇಂದ್ರ, ಚೆಲುವನಹಳ್ಳಿ ಗ್ರಾಮಕ್ಕೆ ತೆರಳುವ ಒಂದು ಕಿಮೀ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ಹಾಗೂ ಶಾಲಾ- ಕಾಲೇಜಿನ ಮಕ್ಕಳಿಗೆ ಬಹಳ ತೊಂದರೆಯಾಗಿದೆ. 20 ವರ್ಷದಿಂದ ರಸ್ತೆ ಸಮಸ್ಯೆ ಇದೆ. ಹೀಗಾಗಿ ರಸ್ತೆ ಡಾಂಬರೀಕರಣಕ್ಕೆ 80 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿ, ಗ್ರಾಮದಲ್ಲಿ ಸುಸಜ್ಜಿತ ರಸ್ತೆ, ಚರಂಡಿ ಹಾಗೂ ಸ್ಟೋರೇಜ್, ಗ್ರಂಥಾಲಯ ಇನ್ನಿತರ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದ್ದಾರೆ. ಶಾಸಕರೊಂದಿಗೆ ರೈತ ಮುಖಂಡರು ಸಹ ಉಪಸ್ಥಿತರಿದ್ದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಚೆಲುವನಹಳ್ಳಿ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಿ, ಗ್ರಾಮದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದಾಗಿ ಭರವಸೆ ನೀಡಿದ್ದಾರೆ.