ಚಾಮರಾಜನಗರ: ಡಬಲ್ ಟಿಕೆಟ್ ಪಡೆದು ಡಬಲ್ ಹೊಣೆ ಹೊತ್ತಿರುವ ವಸತಿ ಸಚಿವ ವಿ. ಸೋಮಣ್ಣ ಈ ಬಾರಿ ಚುನಾವಣೆಯಲ್ಲಿ ಗುರು-ಶಿಷ್ಯರ ನಡುವೆ ಕಾದಾಡಲಿದ್ದು, ರಣಕಣ ತೀವ್ರ ಕುತೂಹಲ ಮೂಡಿಸಿದೆ. ಹೌದು, ವರುಣದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡುವ ಜತೆಗೆ ಚಾಮರಾಜನಗರದಲ್ಲಿ ಸಿದ್ದರಾಮಯ್ಯ ಕಟ್ಟಾ ಅನುಯಾಯಿ ಸಿ. ಪುಟ್ಟರಂಗ ಶೆಟ್ಟಿ ವಿರುದ್ಧವೂ ಸೆಣಸಾಡಬೇಕಿದೆ. ಎರಡೂ ಕೂಡ ಲಿಂಗಾಯತ ಪ್ರಾಬಲ್ಯ ಕ್ಷೇತ್ರಗಳಾಗಿದ್ದು, ಮತ ಬ್ಯಾಂಕ್ ನಂಬಿ ಬಿಜೆಪಿ ಗೆಲುವಿನ ಲೆಕ್ಕಾಚಾರ ಹಾಕಿದೆ.
ಚಾಮರಾಜನಗರದಲ್ಲಿ ನಾಗಶ್ರೀ ಪ್ರತಾಪ್, ಎಂ. ರಾಮಚಂದ್ರು, ವಿಜಯೇಂದ್ರ ಆಪ್ತ ರುದ್ರೇಶ್ ಸೇರಿದಂತೆ 12 ಮಂದಿ ಆಕಾಂಕ್ಷಿಗಳಿದ್ದರು. ಕ್ಷಿಪ್ರ ಬೆಳವಣಿಗೆಯಲ್ಲಿ ಸೋಮಣ್ಣ ಕಣಕ್ಕಿಳಿಯುತ್ತಿದ್ದು ಆಕಾಂಕ್ಷಿಗಳ ಬೆಂಬಲಿಗರು ಸೋಮಣ್ಣ ಜತೆ ಕೈ ಜೋಡಿಸುತ್ತಾರಾ? ಇಲ್ಲ ಕೈ ಕೊಡ್ತಾರಾ ಎಂದು ಕಾದು ನೋಡಬೇಕಿದೆ.
ಚಾಮರಾಜನಗರ ಜಿಲ್ಲೆಯಿಂದ ಸ್ಪರ್ಧಿಸಬೇಕೆಂಬ ವಸತಿ ಸಚಿವ ವಿ. ಸೋಮಣ್ಣ ಅವರ ಬಹುಕಾಲದ ಕನಸು ನನಸಾಗಿತ್ತು. ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರ ಬಿಟ್ಟುಕೊಟ್ಟು, ಗಡಿ ಜಿಲ್ಲೆ ಚಾಮರಾಜನಗರ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವರುಣಾ ಮತ್ತು ಚಾಮರಾಜನಗರ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹ್ಯಾಟ್ರಿಕ್ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರನ್ನು ಒಮ್ಮೆಗೆ ಎದುರಿಸಲಿದ್ದು ಅವರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ನಿರಂಜನ್ ಕುಮಾರ್ಗೆ 5ನೇ ಬಾರಿ ಟಿಕೆಟ್: ಇನ್ನು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಹಾಲಿ ಬಿಜೆಪಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಮತ್ತು ಚಾಮುಲ್ ನಿರ್ದೇಶಕ ಎಂ.ಪಿ ಸುನೀಲ್ ನಡುವೆ ಟಿಕೆಟ್‌ಗಾಗಿ ಫೈಟ್ ನಡೆದರೂ, ನಿರಂಜನ್ ಕುಮಾರ್ ಅವರಿಗೆ 5ನೇ ಬಾರಿಗೆ ಟಿಕೆಟ್ ಒಲಿದಿದೆ. ಕೊಳ್ಳೇಗಾಲದಿಂದ ಹಾಲಿ ಶಾಸಕ ಎನ್.ಮಹೇಶ್ ಮತ್ತು ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕಿನಕಹಳ್ಳಿ ರಾಚಯ್ಯ ಟಿಕೆಟ್ ಬಯಸಿದ್ದರು. ಕಳೆದ ಬಾರಿ ಬಿಎಸ್ಪಿಯಿಂದ ಆಯ್ಕೆಯಾಗಿ ಬಿಜೆಪಿ ಸೇರಿದ್ದ ಎನ್.ಮಹೇಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಜಿ. ಎನ್. ನಂಜುಂಡಸ್ವಾಮಿ ಅವರು ಚುನಾವಣೆ ಘೋಷಣೆಯಾಗುವ ಮುನ್ನವೇ ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ ಮಹೇಶ್ ಟಿಕೆಟ್ ಘೋಷಣೆಗೆ ಮುನ್ನ ಪ್ರಚಾರ ಆರಂಭಿಸಿದ್ದರು.
ನಾಗಪ್ಪ ಕುಟುಂಬಕ್ಕೆ ಹೈಕಮಾಂಡ್ ಮಣೆ: ಹನೂರಿನಿಂದ ಮಾಜಿ ಸಚಿವ ಹೆಚ್. ನಾಗಪ್ಪ ಮತ್ತು ಮಾಜಿ ಶಾಸಕಿ ಪರಿಮಳ ನಾಗಪ್ಪ ಅವರ ಪುತ್ರ ಡಾ.ಪ್ರೀತನ್ ಅವರಿಗೆ ಎರಡನೇ ಬಾರಿಗೆ ಬಿಜೆಪಿ ಟಿಕೆಟ್ ದಕ್ಕಿದೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದರು. ಬಿಜೆಪಿಯಿಂದ ಡಾ. ಪ್ರೀತನ್, ಡಾ. ದತ್ತೇಶ್ ಕುಮಾರ್, ಜನದ್ವನಿ ಬಿ. ವೆಂಕಟೇಶ್ ಮತ್ತು ನಿಶಾಂತ್ ಟಿಕೆಟ್ ಬಯಸಿದ್ದರೂ, ಎರಡನೇ ಬಾರಿಗೆ ಡಾ. ಪ್ರೀತನ್‌ಗೆ ಟಿಕೆಟ್ ಸಿಕ್ಕಿದೆ. ಹನೂರು ಕ್ಷೇತ್ರದ ಇಷ್ಟು ಚುನಾವಣೆಗಳಲ್ಲೂ ನಾಗಪ್ಪ ಹಾಗೂ ರಾಜೂಗೌಡ ಕುಟುಂಬದ ನಡುವೆಯೇ ಫೈಟ್ ನಡೆದಿದ್ದು ಇದು ಈ ಬಾರಿಯೂ ಮುಂದುವರೆಯಲಿದೆ.
ಎರಡೂ ಕ್ಷೇತ್ರಗಳಲ್ಲಿ ಸೋಮಣ್ಣಗೆ ಸೋಲು- ಪುಟ್ಟರಂಗ ಶೆಟ್ಟಿ: ವರುಣ ಹಾಗೂ ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ ಸೋಮಣ್ಣ ಸೋಲ್ತಾರೆ, ಕಾಂಗ್ರೆಸ್ ಗೆಲ್ಲಲಿದೆ ಎಂದು ಚಾಮರಾಜನಗರ ಕೈ ಅಭ್ಯರ್ಥಿ ಸಿ. ಪುಟ್ಟರಂಗ ಶೆಟ್ಟಿ ಭವಿಷ್ಯ ನುಡಿದರು. ಚಾಮರಾಜನಗರ ತಾಲೂಕಿನ ಬಿಸಲವಾಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ಬರೀ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡಿದ್ದಾರೆ. ಕಾಂಗ್ರೆಸ್ ಅಭಿವೃದ್ಧಿ ಪರ. ಆದ್ದರಿಂದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲಿದ್ದು ಕಾಂಗ್ರೆಸ್ ಗೆಲ್ಲಲಿದೆ. ನಾವು ಅಭಿವೃದ್ಧಿಪರ ಇದ್ದೇವೆ. ಜನರು ನಮಗೆ ಆಶೀರ್ವಾದ ಮಾಡಲಿದ್ದಾರೆ. ಬಿಜೆಪಿ-ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿಯೇ ಇಲ್ಲ, ಕಾಂಗ್ರೆಸ್ ಅಷ್ಟೇ ಗೆಲ್ಲುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸೋಮಣ್ಣ vs ಸಿದ್ದರಾಮಯ್ಯ; ಆರ್.ಅಶೋಕ್ vs ಡಿ.ಕೆ.ಶಿವಕುಮಾರ್: ಬಿಜೆಪಿ ಮೆಗಾ ರಣತಂತ್ರ!