ಕೊಳ್ಳೇಗಾಲ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ನಮ್ಮ ಮುಂದಿರುವ ಎರಡು ಸವಾಲುಗಳನ್ನು ಗೆಲ್ಲಬೇಕಿದೆ ಎಂದು ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ನಗರದ ಪ್ರವಾಸಿ ಮಂದಿರಲ್ಲಿ ಕೋವಿಡ್ ನಿಯಂತ್ರಣ ಸಂಬಂಧ 8ನೇ ಟಾಸ್ಕ್ ಫೋರ್ಸ್ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಸಿಟಿವಿಟಿ ಪ್ರಮಾಣ ಇಳಿಸುವುದು ಹಾಗೂ ಲಸಿಕೆ ವಿತರಣೆ ಹೆಚ್ಚಿಸುವುದು ನಮಗಿರುವ ಪ್ರಮುಖ ಸವಾಲಾಗಿದೆ ಎಂದರು.
ಎರಡೂ ಸವಾಲುಗಳನ್ನು ನಿಭಾಯಿಸುವ ಬಗ್ಗೆ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು. ಜಿಲ್ಲೆಯಲ್ಲಿ ಈ ಹಿಂದೆ ಪಾಸಿಟಿವಿಟಿ ಪ್ರಮಾಣ ಶೇ. 13 ಇತ್ತು. ಪ್ರಸ್ತುತ ಶೇ. 8ಕ್ಕೆ ಬಂದಿದೆ. ನಮ್ಮ ಗುರಿ ಶೇ. 5ಕ್ಕಿಂತ ಕೆಳಗೆ ಇಳಿಸುವುದಾಗಿದೆ ಎಂದರು. ಇನ್ಮುಂದೆ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಕೋವಿಡ್ ಪರೀಕ್ಷೆ ಮತ್ತು ಲಸಿಕೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಗಿರಿಜನರ ಹಾಡಿಗಳಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸುವುದು ನಮ್ಮ ಮುಂದಿರುವ ಸವಾಲು ಎಂದು ಹೇಳಿದರು.
ಜಿಲ್ಲೆಯ ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್ ಲಭ್ಯತೆ ಸಾಕಷ್ಟು ಪ್ರಮಾಣದಲ್ಲಿ ಇದೆ. ಕೋವಿಡ್ ಕೇರ್ ಸೆಂಟರ್ಗಳಲ್ಲಿರುವ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಶೇ. 88ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಮೂರನೇ ಅಲೆ ಎದುರಿಸಲು ಸಿದ್ಧ: ಕೋವಿಡ್ 3ನೇ ಅಲೆಯ ಬಗ್ಗೆ ವೈದ್ಯರು ಮಾಡಿದ ಅಧ್ಯಯನದ ಸಣ್ಣ ವರದಿ ನಮ್ಮ ಮುಂದಿದೆ. ಸೋಮವಾರ ಜಿಲ್ಲಾಧಿಕಾರಿಗಳು ಸಭೆ ನಡೆಸುವಾಗ ವರದಿಯ ಬಗ್ಗೆ ಚರ್ಚಿಸುತ್ತಾರೆ. ಮೂರನೇ ಅಲೆ ಎದುರಿಸಲು ಚಾಮರಾಜನಗರ ಜಿಲ್ಲೆ ಸಿದ್ಧವಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಓದಿ : ರೇಣುಕಾಚಾರ್ಯ ಮೇಲೆ ಪ್ರಕರಣ ದಾಖಲಿಸಲು ಮುಂದಾದ ತಹಸೀಲ್ದಾರ್ ವಿರುದ್ಧ ಸೋಂಕಿತರ ಆಕ್ರೋಶ